ರಾಷ್ಟ್ರಾದ್ಯಂತ ಪಾನನಿಷೇಧಕ್ಕೆ ನಿತೀಶ್ ಕುಮಾರ್ ಕರೆ

Update: 2020-02-17 15:53 GMT

ಹೊಸದಿಲ್ಲಿ,ಫೆ.17: ರಾಷ್ಟ್ರಾದ್ಯಂತ ಪಾನನಿಷೇಧಕ್ಕೆ ಕರೆನೀಡಿರುವ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಅವರು,2016ರಲ್ಲಿ ತನ್ನ ರಾಜ್ಯದಲ್ಲಿ ಪಾನನಿಷೇಧವನ್ನು ಜಾರಿಗೊಳಿಸಲಾಗಿದ್ದು,ಇದರಿಂದಾಗಿ ರಾಜ್ಯದ ಬಡತನ ಹೆಚ್ಚಾಗಿಲ್ಲ ಎಂದು ಹೇಳಿದ್ದಾರೆ.

  

ಇಲ್ಲಿ ‘ಮದ್ಯಮುಕ್ತ ಭಾರತ’ ಸಮಾವೇಶದಲ್ಲಿ ಮಾತನಾಡುತ್ತಿದ್ದ ಕುಮಾರ್,ಮದ್ಯ ನಿಷೇಧವು ಮಹಾತ್ಮಾ ಗಾಂಧಿಯವರ ಬಯಕೆಯಾಗಿತ್ತು. ಮದ್ಯವು ಬದುಕುಗಳನ್ನು ನಾಶಗೊಳಿಸುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು ಎಂದರು. ಸದ್ಯ ಬಿಹಾರದ ಜೊತೆಗೆ ಗುಜರಾತ,ನಾಗಾಲ್ಯಾಂಡ್,ಮಿಝೊರಾಂ ಮತ್ತು ಲಕ್ಷದ್ವೀಪಗಳಲ್ಲಿ ಮದ್ಯನಿಷೇಧ ಜಾರಿಯಲ್ಲಿದೆ.

ಈ ಹಿಂದೆ ರಾಷ್ಟ್ರದಲ್ಲಿ ಆಗಾಗ್ಗೆ ಪಾನನಿಷೇಧ ಹೇರಲಾಗಿತ್ತಾದರೂ ಬಳಿಕ ಅದನ್ನು ಹಿಂದೆಗೆದುಕೊಳ್ಳಲಾಗಿತ್ತು. ಬಿಹಾರದಲ್ಲಿಯೂ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರು ಪಾನನಿಷೇಧವನ್ನು ಹೇರಿದ್ದರು,ಆದರೆ ಅದನ್ನು ಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. 2011ರಲ್ಲಿಯೇ ಬಿಹಾರದಲ್ಲಿ ಮದ್ಯನಿಷೇಧಕ್ಕೆ ತಾನು ಯೋಜಿಸಿದ್ದೆ ಮತ್ತು ಅಂತಿಮವಾಗಿ 2016ರಲ್ಲಿ ಅದನ್ನು ಜಾರಿಗೊಳಿಸಲು ಸಾಧ್ಯವಾಗಿತ್ತು ಎಂದರು. ಆದಾಯ ನಷ್ಟವಾಗುತ್ತದೆ ಎನ್ನುವುದು ಮದ್ಯನಿಷೇಧವನ್ನು ಜಾರಿಗೊಳಿಸದಿರಲು ಒಂದು ಕುಂಟುನೆಪವಾಗಿದೆ ಎಂದ ಅವರು,ಆನ್‌ಲೈನ್ ಪೊರ್ನೊಗ್ರಫಿಯನ್ನೂ ನಿಷೇಧಿಸುವಂತೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News