ಕೇಂದ್ರ ಸರಕಾರ, ಸಿಬಿಐಯಿಂದ ಪ್ರತಿಕ್ರಿಯೆ ಕೋರಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ, ಫೆ. 17: ದಿಲ್ಲಿ ವಿಶ್ವವಿದ್ಯಾನಿಲಯದ ಆಲ್ ವುಮನ್ ಗಾರ್ಗಿ ಕಾಲೇಜಿನಲ್ಲಿ ಕಳೆದ ವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಕುರಿತು ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಮನವಿ ಕುರಿತು ದಿಲ್ಲಿ ಹೈಕೋರ್ಟ್ ಸೋಮವಾರ ಕೇಂದ್ರ ಸರಕಾರ ಹಾಗೂ ಸಿಬಿಐಯ ಪ್ರತಿಕ್ರಿಯೆ ಕೋರಿದೆ.
ವಕೀಲ ಎಂ.ಎಲ್. ಶರ್ಮಾ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಜಿ.ಎಸ್. ಸಿಸ್ಟಾನಿ ಹಾಗೂ ಸಿ. ಹರಿ ಶಂಕರ್ ಅವರನ್ನು ಒಳಗೊಂಡ ಪೀಠ ಕೇಂದ್ರ ಸರಕಾರ ಹಾಗೂ ಸಿಬಿಐಗೆ ನೋಟಿಸು ಜಾರಿ ಮಾಡಿದೆ. ಸುಪ್ರೀಂ ಕೋರ್ಟ್ ಮನವಿ ಸ್ವೀಕರಿಸಲು ನಿರಾಕರಿಸಿದ ಹಾಗೂ ಹೈಕೋರ್ಟ್‌ಗೆ ಮನವಿ ಸಲ್ಲಿಸುವಂತೆ ಸೂಚಿಸಿದ ಗಂಟೆಗಳ ಬಳಿಕ ಎಂ.ಎಲ್. ಶರ್ಮಾ ಅವರು ದಿಲ್ಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಕಾಲೇಜು ಕ್ಯಾಂಪಸ್‌ನ ಎಲ್ಲ ವೀಡಿಯೊ ರೆಕಾರ್ಡಿಂಗ್ ಹಾಗೂ ಸಿಸಿಟಿವಿ ಕೆಮರಾ ದೃಶ್ಯಾವಳಿಗಳನ್ನು ಸಂರಕ್ಷಿಸಿ ಇರಿಸುವಂತೆ ಶರ್ಮಾ ಅವರು ತಮ್ಮ ಮನವಿಯಲ್ಲಿ ಕೋರಿದ್ದಾರೆ.