×
Ad

ಜಿಎಸ್‌ಟಿ ಭವನದಲ್ಲಿ ಬೆಂಕಿ ದುರಂತ

Update: 2020-02-17 22:43 IST

ಮುಂಬೈ, ಫೆ.17: ದಕ್ಷಿಣ ಮುಂಬೈಯ ಜಿಎಸ್‌ಟಿ ಭವನದಲ್ಲಿ ಸೋಮವಾರ ಬೆಂಕಿ ದುರಂತ ಸಂಭವಿಸಿದ್ದು ತಕ್ಷಣ ಉದ್ಯೋಗಿಗಳನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಝಗಾಂವ್ ಪ್ರದೇಶದಲ್ಲಿರುವ ಈ ಬಹುಮಹಡಿ ಕಟ್ಟಡದ 9ನೇ ಮಹಡಿಯಲ್ಲಿ ಮಧ್ಯಾಹ್ನ 12:30ರ ವೇಳೆ ಬೆಂಕಿ ಕಾಣಿಸಿಕೊಂಡಿದ್ದು ಬಳಿಕ 10ನೇ ಮಹಡಿಗೆ ಹರಡಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ 20ಕ್ಕೂ ಹೆಚ್ಚು ಅಗ್ನಿಶಾಮಕ ದಳದವರು ಸುಮಾರು 3 ಗಂಟೆಗಳ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ದುರಂತದಲ್ಲಿ ಯಾವುದೇ ದಾಖಲೆಗಳು ನಾಶವಾಗಿಲ್ಲ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

 ಕಟ್ಟಡದಲ್ಲಿ ಪೇಪರ್ ಹಾಗೂ ಮರದ ಸಾಮಾಗ್ರಿಗಳನ್ನು ರಾಶಿ ಹಾಕಿದ್ದರಿಂದ ಬೆಂಕಿ ಶೀಘ್ರ ಹರಡಿದೆ. ಕಟ್ಟಡವಿಡೀ ದಟ್ಟ ಹೊಗೆ ತುಂಬಿದ್ದ ಕಾರಣ ಅಗ್ನಿಶಾಮಕ ದಳದವರು ಉಸಿರಾಟದ ಉಪಕರಣ ಬಳಸಿ ಕಾರ್ಯಾಚರಣೆ ನಡೆಸಿದರು. ಕಟ್ಟಡದಲ್ಲಿದ್ದ ಹಲವು ಉದ್ಯೋಗಿಗಳನ್ನು ಅಲ್ಲಿಂದ ತೆರವುಗೊಳಿಸಲಾಗಿದೆ ಎಂದು ಮುಂಬೈಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಭಾತ್ ರಹಂಗ್‌ದಳೆ ಹೇಳಿದ್ದಾರೆ.

ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಕೆಲವು ಉದ್ಯೋಗಿಗಳು ಹೇಳಿದ್ದಾರೆ. ಆದರೆ ತನಿಖೆಯ ಬಳಿಕ ಕಾರಣ ಸ್ಪಷ್ಟವಾಗಲಿದೆ ಎಂದು ಬಿಎಂಸಿ ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಸೇಲ್ಸ್ ಟ್ಯಾಕ್ಸ್ ಭವನ ಎಂದು ಹೆಸರಿದ್ದ ಈ ಕಟ್ಟಡಕ್ಕೆ 2017ರ ಬಳಿಕ ಜಿಎಸ್‌ಟಿ ಭವನ ಎಂದು ಮರು ನಾಮಕರಣ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News