ಜಾಮಿಯಾ ಮಿಲ್ಲಿಯಾ ವಿವಿಯಲ್ಲಿ ಪೊಲೀಸ್ ದೌರ್ಜನ್ಯದ ಹೊಸ ವಿಡಿಯೋ ಬಹಿರಂಗ

Update: 2020-02-17 17:48 GMT

ಹೊಸದಿಲ್ಲಿ,ಫೆ.17: ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ದಿಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದ ಹೊಸ ವಿಡಿಯೋವೊಂದು ಸುದ್ದಿಜಾಲ ತಾಣ ‘The quint.com’ ಸೋಮವಾರ ಬಿಡುಗಡೆಗೊಳಿಸಿದೆ.

 2019ರ ಡಿಸೆಂಬರ್ 15ರಂದು ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಬಳಿಕ ದಿಲ್ಲಿ ಪೊಲೀಸರು ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯ ಆವರಣದೊಳಗೆ ಪ್ರವೇಶಿಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ದೃಶ್ಯಗಳನ್ನು ಒಳಗೊಂಡಿದೆಯೆನ್ನಲಾದ ಸಿಸಿಟಿವಿ ವಿಡಿಯೋವನ್ನು ಜಾಮಿಯಾ ಸಮನ್ವಯ ಸಮಿತಿ ರವಿವಾರ ಬಿಡುಗಡೆಗೊಳಿಸಿತ್ತು. ಇದರ ಬೆನ್ನಲ್ಲೇ ದಿಲ್ಲಿ ಪೊಲೀಸರು, ಹೊಸ ಸಿಸಿಟಿವಿ ವಿಡಿಯೋವೊಂದನ್ನು ಬಿಡುಗಡೆಗೊಳಿಸಿದ್ದರು. ಅದರಲ್ಲಿ ವಿದ್ಯಾರ್ಥಿಗಳು ಜಾಮಿಯಾ ಮಿಲಿಯಾ ವಿವಿ ವಿದ್ಯಾರ್ಥಿಗಳು ಕೈಗಳಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ವಿವಿ ಎಂಎ.,ಎಂ.ಫಿಲ್ ವಿಭಾಗದಲ್ಲಿರುವ ಹಳೆಯ ಲೈಬ್ರರಿ ಹಾಲ್ ಪ್ರವೇಶಿಸುತ್ತಿರುವುದನ್ನು ತೋರಿಸಲಾಗಿತ್ತು. ಪೊಲೀಸರು ಒಳಬಾರದಂತೆ ಮಾಡಲು ವಿದ್ಯಾರ್ಥಿಗಳು ಹಾಲ್‌ನ ಬಾಗಿಲಿಗೆ ಮೇಜುಗಳನ್ನು ಇರಿಸಿ ತಡೆಯೊಡ್ಡಿರುವುದನ್ನು ಕೂಡಾ ತೋರಿಸಲಾಗಿತ್ತು.

 ಆದಾಗ್ಯೂ,ಸೋಮವಾರ ‘Thequint.com’ ಪ್ರಸಾರ ಮಾಡಿದ ಸಿಸಿಟಿವಿ ವಿಡಿಯೋದಲ್ಲಿ ವಾಚನಕೊಠಡಿಯೊಳಗೆ ಕೂಡಿಹಾಕಲ್ಪಟ್ಟ ವಿದ್ಯಾರ್ಥಿಗಳು, ತಮ್ಮನ್ನು ಹೊರಹೋಗಲು ಬಿಡುವಂತೆ ಮೊರೆಯಿಡುತ್ತಿರುವ ದೃಶ್ಯಗಳು ಕಂಡುಬಂದಿವೆ.

 ಪೊಲೀಸರು ಲೈಬ್ರರಿ ಹಾಲ್ ಪ್ರವೇಶಿಸಿ, ಅಲ್ಲಿದ್ದ ಕುರ್ಚಿ, ಮೇಜುಗಳನ್ನು ಎಳೆದಾಡುತ್ತಿರುವುದು ಕಂಡುಬಂದಿದೆ. ಕೊಠಡಿಯೊಳಗೆ ಕೂಡಿಹಾಕಲ್ಪಟ್ಟ ವಿದ್ಯಾರ್ಥಿಗಳನ್ನು ಪೊಲೀಸರು ನಿರ್ದಯವಾಗಿ ಥಳಿಸುತ್ತಿರುವ ದೃಶ್ಯವೂ ಕೂಡಾ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಮಧ್ಯೆ ವಿಶ್ವವಿದ್ಯಾನಿಲಯ ಆಡಳಿತಮಂಡಳಿ ಸಿಸಿಟಿವಿ ವಿಡಿಯೋ ಬಹಿರಂಗದ ಹಿಂದೆ ತನ್ನ ಪಾತ್ರವಿಲ್ಲವೆಂದು ಸ್ಪಷ್ಟಪಡಿಸಿದೆ. ವಿಡಿಯೋ ಬಿಡುಗಡೆ ಮಾಡಿರುವ ಜೆಸಿಸಿಯು ಅಧಿಕೃ ಸಂಸ್ಥೆಯಲ್ಲವೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News