ರಾಮಧಾನ್ಯ ರಾಗಿಯ ಕಣಸು

Update: 2020-02-17 18:37 GMT

ಕೇವಲ ರಾಗಿಮುದ್ದೆ ಮತ್ತು ರೊಟ್ಟಿಯಷ್ಟೇ ಬದುಕು ತಲೆಮಾರುಗಳು ಉಳಿದು, ಬೆಳೆದು ಬಂದಿವೆ. ಅವರಲ್ಲಿ ಕೆಲವರು ಅನ್ನವನ್ನೇ ಅವರ ಇಡೀ ಜೀವನ ಕಂಡಿಲ್ಲ. ಅದರ ಬಗ್ಗೆ ಆಸೆ ಪಟ್ಟಿಲ್ಲ. ಬಹುಶಃ ರಾಗಿಯ ಜೊತೆಗೆ ಜನರಿಗೆ ಒಂದು ಭಾವನಾತ್ಮಕ ಸಂಬಂಧ, ಒಡನಾಟ ಇರುವ ಕಾರಣವೋ ಏನೋ ಅದು ಎಂತಹದು ದೈತ್ಯ ಬೆಳೆಯ ಪ್ರಲೋಭನೆ ಬಂದರೂ, ನಾನಾ ರೀತಿಯ ಹೊಸ ಹೊಸ ಆಹಾರ ಪದಾರ್ಥಗಳು, ಕ್ರಮಗಳು ಪರಿಚಯವಾದರೂ ರಾಗಿಯ ಮೇಲಣ ಪ್ರೀತಿ ಜನರಿಗೆ ಹೋಗಿಲ್ಲ.

ರಾಗಿಯ ಒಕ್ಕಲು:

 ದಕ್ಷಿಣ ಕರ್ನಾಟಕದ ಬಯಲು ಸೀಮೆಯ ಜನರಿಗೆ ರಾಗಿ ಎಂದರೆ ಜೀವದ ಬೆಳೆ. ದಿನನಿತ್ಯದ ಬದುಕಿನಲ್ಲಿ ರಾಗಿ ಇಲ್ಲದೇ ಜೀವನವೇ ಇಲ್ಲ. ಇವತ್ತಿನ ನಗರದ ತಲೆಮಾರು ಸ್ವಲ್ಪರಾಗಿಯಿಂದ ದೂರವುಳಿದಿರಬಹುದು, ಆದರೆ ಎಲ್ಲಾ ತಲೆಮಾರುಗಳಿಗೂ ರಾಗಿ ಎಂಬುದು ‘ಅಮೃತ ಸಮಾನದ ಆಹಾರದ ಬೆಳೆ’. ರಾಗಿಮುದ್ದೆ, ರಾಗಿರೊಟ್ಟಿ ತಿನ್ನದೇ ಇರುವ ಜನರಿರಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ ರಾಗಿ ಅನ್ನುವುದು ನಮ್ಮ ಆಹಾರ ಸಂಸ್ಕೃತಿಯಲ್ಲಿ ಬೆರೆತುಹೋಗಿದೆ. ಇದಕ್ಕೆ ಬಯಲು ಸೀಮೆಯ ಭೌಗೋಳಿಕ ಪರಿಸ್ಥಿತಿಯೂ ಕಾರಣವಾಗಿದೆ. ಇಲ್ಲಿನ ಅತಿ ಹೆಚ್ಚು ಮಳೆ ಆಶ್ರಿತ ಬೇಸಾಯ ಭೂಮಿ ಕಿರುಧಾನ್ಯ (Millets) ಬೆಳೆಗಳಿಗೆ ಯೋಗ್ಯವಾಗಿದೆ. ಕಡಿಮೆ ಮಳೆ ಬೀಳುವ ಬಯಲು ಸೀಮೆಯ ಜನರಿಗೆ ಕಿರುಧಾನ್ಯಗಳೇ ಆಹಾರದ ಮೂಲವಾಗಿದ್ದುವು. ನೀರಾವರಿ ಸೌಕರ್ಯವಿರುವ ಕಡೆಗೆ ಮಾತ್ರ ಭತ್ತ, ಕಬ್ಬು ಮುಂತಾದ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲಾಗುತ್ತದೆ. ರಾಗಿ, ಬರ್ಕ, ಕೂರಲು, ನವಣೆ, ಸಾಮೆ ಮೊದಲಾದ ಕಿರುಧಾನ್ಯಗಳು ಅತ್ಯಂತ ಸಂಕಷ್ಟ ಕಾಲದಲ್ಲೂ ಜನರ ಕೈಹಿಡಿದು ಗ್ರಾಮೀಣ ಜೀವನವನ್ನು ಉಳಿಸಿವೆ. ನಾನು ಹುಟ್ಟುವ ವೇಳೆಗಾಗಲೇ ನಮ್ಮಲ್ಲಿ ಈ ಕಿರುಧಾನ್ಯ ಬೆಳೆಗಳು ನಶಿಸಿ ಹೋಗಿದ್ದವು. ಅಣೆಕಟ್ಟು ನೀರಾವರಿ ವ್ಯವಸ್ಥೆಗಳು ಬಂದಮೇಲೆ ಭತ್ತ, ಕಬ್ಬು ಮತ್ತು ತೋಟಗಾರಿಕೆ ಬೆಳೆಗಳು ಲಾಭದಾಯಕವಾಗಿವೆಯೆಂದು ಕಾಣಲಾಗಿ ಜನ, ರಾಗಿಯನ್ನು ನಿರ್ಲಕ್ಷ ಮಾಡಿದರು. ಆದರೆ ತಿನ್ನುವುದನ್ನಲ್ಲ, ಬೆಳೆಯುವುದನ್ನು ಮಾತ್ರ. ಕೃಷಿ ಬಳಕೆಯ ಬೋರ್‌ವೆಲ್‌ಗಳು ಹೆಚ್ಚು ಹೆಚ್ಚು ಆಧುನಿಕಗೊಂಡಷ್ಟು ಮಳೆ ಆಶ್ರಿತ ಬೆಳೆಗಳು ಅವುಗಳ ಉಪಕ್ರಮಗಳು ಬದಲಾಗಿಬಿಟ್ಟವು. ಮಾರುಕಟ್ಟೆ ಆಧಾರಿತ ಬೆಳೆಗಳು, ತರಕಾರಿಗಳು ರೂಢಿಗೆ ಬಂದುಬಿಟ್ಟವು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದ ಎಲ್ಲಾ ರೀತಿಯ ಹವಾಮಾನ ಮತ್ತು ಕೃಷಿ ಬದಲಾವಣೆಗಳ ನಡುವೆಯೂ ನಶಿಸಿಹೋಗದ ಬಲವಾಗಿ ಬೇರು ಬಿಟ್ಟು ಉಳಿದುಕೊಂಡ ಗ್ರಾಮೀಣ ಬೆಳೆ ‘ರಾಗಿ’ ಒಂದೇ! ಕೇವಲ ರಾಗಿಮುದ್ದೆ ಮತ್ತು ರೊಟ್ಟಿಯಷ್ಟೇ ಬದುಕು ತಲೆಮಾರುಗಳು ಉಳಿದು, ಬೆಳೆದು ಬಂದಿವೆ. ಅವರಲ್ಲಿ ಕೆಲವರು ಅನ್ನವನ್ನೇ ಅವರ ಇಡೀ ಜೀವನ ಕಂಡಿಲ್ಲ. ಅದರ ಬಗ್ಗೆ ಆಸೆ ಪಟ್ಟಿಲ್ಲ. ಬಹುಶಃ ರಾಗಿಯ ಜೊತೆಗೆ ಜನರಿಗೆ ಒಂದು ಭಾವನಾತ್ಮಕ ಸಂಬಂಧ, ಒಡನಾಟ ಇರುವ ಕಾರಣವೋ ಏನೋ ಅದು ಎಂತಹದು ದೈತ್ಯ ಬೆಳೆಯ ಪ್ರಲೋಭನೆ ಬಂದರೂ, ನಾನಾ ರೀತಿಯ ಹೊಸ ಹೊಸ ಆಹಾರ ಪದಾರ್ಥಗಳು, ಕ್ರಮಗಳು ಪರಿಚಯವಾದರೂ ರಾಗಿಯ ಮೇಲಣ ಪ್ರೀತಿ ಜನರಿಗೆ ಹೋಗಿಲ್ಲ. ಬಾಲ್ಯದ ರಾಗಿಕಣದ ನೆನಪುಗಳೂ ಈಗಲೂ ಸ್ಮತಿಪಟಲ ದಲ್ಲಿ ಮಸುಕಾಗಿ ಉಳಿದುಬಿಟ್ಟಿವೆ.. ಒಟ್ಟು ಪಾತಿಯಿಂದ ಕಿತ್ತು ನಾಟಿ ಮಾಡಿದ ರಾಗಿ ಪೈರುಗಳು, ಅವುಗಳ ಪಾತಿ ಸುತ್ತ ಸುತ್ತ ಚೆಲ್ಲಿದ ಬೇರೆ ಬೇರೆ ಕಾಳಿನ ಬಳ್ಳಿಗಳು.. ರಾಗಿಯ ತೆನೆ ಬಲಿಯುವ ಮುನ್ನ ಅವನ್ನು ಕಿತ್ತು ತಂದು ಒಲೆಯಲ್ಲಿ ಸುಟ್ಟು ಸಕ್ಕರೆಯನ್ನು ಬೆರೆಸಿ ‘ಕಾಚಕ್ಕಿ’ ಮಾಡಿ ತಿನ್ನುತ್ತಿದ್ದುದು.. ರಾಗಿತೆನೆ ಕೂಯ್ದ ಮೇಲೆ ಅದನ್ನು ರಾಗಿ ಕಣದಲ್ಲಿ ಒಣಗಿಸುವುದು, ರಾಗಿಹುಲ್ಲಿನ ಬಣವೆ ಮೇಲಿಂದ ಜಾರು ಆಟ ಆಡುತ್ತಿದ್ದುದು. ಒಣಗಿದ, ಕಲ್ಲಿನ ರಾಟೆ ಹೊಡೆದು ತೂರಿದ ಕೈಗೆ ಸಿಗುತ್ತಿದ್ದ ಕಪ್ಪುಮತ್ತು ಕೆಂಪು ರಾಗಿಯನ್ನು ಬೊಗಸೆಯಲ್ಲಿ ಹಿಡಿದು ಸರಸರನೆ ಸುರಿದು ಆಟವಾಡುವುದು. ಎತ್ತಿನ ಬಂಡಿಯಲ್ಲಿ ತುಂಬಿ ತಂದ ರಾಗಿಯನ್ನು ಹಿತ್ತಿಲ ಮನೆ ಅಥವಾ ನಡುಮನೆಯ ಕಣಜಗಳಲ್ಲಿ ತುಂಬಿ ಸೆಗಣಿ ಸಾರಿಸಿ ಮುಚ್ಚುವ ಕ್ರಮಗಳು ಎಲ್ಲವು ಹಾಗೇ ಹಸಿರಾಗಿವೆ. ಇದೆಲ್ಲಾ ರಾಗಿ ಒಕ್ಕಲಿನ ನೆನಪಾದರೆ ರಾಗಿ ಸಂಸ್ಕೃತಿಯದ್ದು ಬೇರೆಯದೇ ಕಥನ. ಈ ಹೊತ್ತಿನಲ್ಲಿ ಸಾಧ್ಯವೇ ಇಲ್ಲ ಎಂದು ನಂಬಲಾಗಿದ್ದ ರಾಗಿ ತಳಿ ಅಭಿವೃದ್ಧಿಯನ್ನು ಸಾಧ್ಯವಾಗಿಸಿ ವಿವಿಧ ರೀತಿಯ ಇಂಡಾಫ್ ರಾಗಿತಳಿಗಳನ್ನು ಹುಟ್ಟುಹಾಕಿದ ರಾಗಿಲಕ್ಷ್ಮಣಯ್ಯ ನವರನ್ನು ಮರೆಯಲಾಗದು. ರಾಗಿ ಸಂಸ್ಕೃತಿ:

ಒಂದು ಬೆಳೆ ಒಂದು ಸಂಸ್ಕೃತಿಯನ್ನು ಹುಟ್ಟಿ ಹಾಕಬಲ್ಲುದೇ ಅಂದರೆ ಹೌದು ಎಂಬುದಕ್ಕೆ ಒಂದು ಉದಾಹರಣೆ ‘ರಾಗಿ’. ಇಂತಹದೊಂದು ಸಂಸ್ಕೃತಿ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡು ಮೂರು ರಾಜ್ಯಗಳಲ್ಲಿಯೂ ಇದೆ. ಇದರಾಚೆಗೂ ಇದ್ದಿರಬಹುದೇನೋ..ಗೊತ್ತಿಲ್ಲ. ಇಂತಹ ಒಂದು ಸಂಸ್ಕೃತಿಯನ್ನು ಬಂಗಾಳದಲ್ಲಿ ‘ಹಿಲ್ಸಾ ಮೀನು’ ಹುಟ್ಟುಹಾಕಿದೆ. ರಾಗಿಯ ಒಕ್ಕಲುತನ ಮುಗಿದ ಮೇಲೆ ರಾಗಿಕಣದಲ್ಲಿ ಅದರ ಸಂಸ್ಕೃತಿಯ ಅನಾವರಣವಾಗುತ್ತದೆ. ರಾಗಿಗುಡ್ಡೆ ಹಾಕುವುದು, ಅಲಂಕರಿಸುವುದು, ಕೊಳಗದಲ್ಲಿ ಬೆಳೆದವರಿಗೆ ದಾನ ಕೊಡುವುದು, ಅವನ್ನು ತುಂಬುವ ಲೆಕ್ಕ ಮತ್ತು ಕಣಜದಿಂದ ಅವನ್ನು ಹೊರಗೆ ತೆಗೆಯುವುದು, ಆಗ ಹಾಡುವ ನೂರಾರು ಪದಗಳು. ಅದರಲ್ಲೂ ರಾಗಿಯನ್ನು ಬೀಸುವಾಗ ಹಾಡುವ ಪದಗಳು ಬಹಳ ಪ್ರಸಿದ್ಧಿ. ಯಾವುದೇ ಯಂತ್ರ, ವಿದ್ಯುತ್‌ಗಳ ಹಂಗಿಲ್ಲದೆ ರಾಗಿಕಲ್ಲನ್ನು ಗಂಟೆಗಟ್ಟಲೆ ತಿರುಗಿಸುತ್ತಾ ಸಂಸಾರದ, ಸಮಾಜದ ಬಗ್ಗೆ ಪದವ ಕಟ್ಟುತ್ತಾ ಹಾಡುವ ಹೆಣ್ಣುಮಕ್ಕಳು.. ಆ ಮೂಲಕ ಕಟ್ಟಿಕೊಂಡ ಸುಸ್ಥಿರವಾದ ಒಂದು ಸಂಸ್ಕೃತಿ ಕಥನ ದೊಡ್ಡದು. ಉದಾ: ಹಾಡು ಮೂಡು ಮುಂದಾಗಿ ಹೂಡೇವು ರಾಗೀ ಕಲ್ಲು ರೂಢಿಗೆ ಈಶ್ವರನ ಮಡದೀಯ-ಗೌರಮ್ಮನ ಹೂಡೇವು ಹೊನ್ನ ಗೆರಸೀಯ 

ಕಲ್ಲು ಹಿಡಿದಾಗ ಒಳ್ಳೊಳ್ಳೆ ನುಡಿ ನುಡಿಯೆ ಸೊಲ್ಲು ಸೊಲ್ಲಿಗೆ ಶಿವ ಬರಲಿ-ಈ ಮನೆ ಮಲ್ಲಯ್ಯ ಬರಲಿ ಮನದಾಗೆ

ಬಿದಿರೆ ಬೆಟ್ಟದ ಮೇಲೆ ಚದುರೆ ರಾಗಿಯ ಕಲ್ಲೆ ಮದನಾರಿ ನೊಂಬೊ ಹಿಡಿಗೂಟ-ಹಿಡುಕೊಂಡು ಮೊದಲೇ ಸಿರಿಗೌರಿ ನೆನೆದೇವು

ಕಲ್ಲು ಬಿಟ್ಟೇವೆಂದು ಎಲ್ಲರೂ ಕೇಳಿರಿ ಕುಕ್ಕೇಲಿ ರಾಗಿ ಬಿಳಿ ಎಲೆ-ತಕ್ಕೊಂಡು ಮತ್ತೆ ರಾತ್ರೀಕೆ ಬರುತೀವಿ

  ಮುಂತಾಗಿ ಸಾವಿರಾರು ರಾಗಿ ಬೀಸುವ ಪದಗಳು ಸೃಷ್ಟಿಯಾಗಿವೆ, ಹಾಡುತ್ತಾ ಹಾಡುತ್ತಾ ದಣಿದ ಜೀವಗಳಿಗೆ ಸಾಂತ್ವನವಾಗಿವೆ. ರಾಗಿ ಬರೀಯ ಜನಪದರಿಗೆ ಮಾತ್ರ ಸಿಮೀತವಾಗಿಲ್ಲ. ಅದರ ಮಹಿಮೆ ಎಷ್ಟು ದೊಡ್ಡದು ಎಂದರೆ ಕನಕದಾಸರು ರಾಗಿಯನ್ನು ರಾಮಧಾನ್ಯವೆಂದು ಕರೆದು ‘ರಾಮಧಾನ್ಯದ ಚರಿತೆ’ ಬರೆದರು. ನರೆದಲೆಗ ಮತ್ತು ವ್ರಿಹಿಗ ನಡುವೆ ಜಟಾಪಟಿ ನಡೆದು ಅದು ರಾಮನ ಆಸ್ಥಾನಕ್ಕೆ ಹೊಕ್ಕು ಕಡೆಗೆ ರಾಮನು ರಾಗಿಯನ್ನು ‘ರಾಮಧಾನ್ಯ’ವೆಂದು ಹೆಸರಿಟ್ಟು ಹರಸುತ್ತಾನೆ..

ಸುರಮುನಿಗಳಿಂತೆನಲು, ಭೂಸುರ

ವರರು, ಸಂತೋಷಿಸಲು ಸಭಿಕರು

’ನರೆದಲೆಗ ನೀ ಬಾ’ರೆನುತ ರಾಮನೃಪಾಲ ನೆರೆಮೆಚ್ಚಿ

ಕರೆದು ಕೊಟ್ಟನು ತನ್ನ ನಾಮವ

ಧರೆಗೆ ರಾಘವನೆಂಬ ಪೆಸರಾ ಯ್ತಿರದೆ ವ್ರಿಹಿ ನಾಚಿದನು. ಸಭೆಯಲ್ಲಿ ಶಿರವ ಬಾಗಿಸಿದ

(ನರೆದಲೆಗ = ರಾಗಿ, ರಾಘವ -- ರಾಗಿ, ವ್ರಿಹಿಗ = ಭತ್ತ)

ಇನ್ನು ಪುರಂದರದಾಸರಂತೂ ರಾಗಿ ಕೀರ್ತನೆಯನ್ನೇ ಬರೆದರು. ಮನುಷ್ಯ ಏನಾಗಬೇಕು ಎಂದರೆ ‘ರಾಗಿ’ ಆಗಬೇಕು.. ಯಾವ ‘ರಾಗಿ’ ಅಂದರೆ..

 ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ

ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು

ಅನ್ನದಾನವ ಮಾಡುವರಾಗಿ

ಅನ್ನ ಛತ್ರವನ್ನಿಟ್ಟವರಾಗಿ

ಅನ್ಯ ವಾರ್ತೆಯ ಬಿಟ್ಟವರಾಗಿ

ಅನುದಿನ ಭಜನೆಯ ಮಾಡುವರಾಗಿ

ಮಾತಾಪಿತೃಗಳ ಸೇವಿಪರಾಗಿ

ಪಾಪ ಕಾರ್ಯದ ಬಿಟ್ಟವರಾಗಿ

ಜಾತಿಯಲಿ ಮಿಗಿಲಾದವರಾಗಿ

ನೀತಿ ಮಾರ್ಗದಲಿ ಖ್ಯಾತರಾಗಿ

ಹೀಗೆ ರಾಗಿಕಣ, ರಾಗಿ ಕಲ್ಲು, ರಾಗಿಕಣಜ, ರಾಗಿ ಬೀಸುವ ಪದ, ರಾಗಿಕೀರ್ತನೆ ಎಲ್ಲವೂ ಆಗುತ್ತಾ ಸದಾ ಕಾಲ ನಮ್ಮ ಆಹಾರದ ಅನನ್ಯ ಕ್ರಮಗಳಲ್ಲಿ ಬೆರೆತಿರುವ ರಾಗಿ ಈಗಿನ ಆಧುನಿಕ ಕಾಲದ ಅಗತ್ಯತೆಗಳಿಗೂ ಪ್ರತಿಸ್ಪಂದಿಸುತ್ತಿದೆ.. ಇವಾಗ ರಾಗಿ ಬಿಸ್ಕಟ್‌ಗಳು, ರಾಗಿ ಕೇಕ್, ವಿವಿಧ ರೀತಿಯ ಡಯಟ್ ಆಹಾರಗಳು, ಅಂಬಲಿಗಳು, ರಾಗಿ ಬಿಯರ್ (ಇದು ಪ್ರಾಚೀನ ಕಾಲದ್ದು ನಮಗೆ ಹೊಸದಾಗಿ ಮತ್ತೆ ಪರಿಚಯವಾಗುತ್ತಿದೆ) ಆಗಿ ಸಿಗುತ್ತಿದೆ. ಈಚೆಗಂತು ಮೈಸೂರಿನ CFTRI   ರಾಗಿ ಮುದ್ದೆ ಮಾಡುವ ಸಣ್ಣ ಯಂತ್ರವನ್ನು ಕೂಡ ತಯಾರಿಸಿದೆ. ಆಳುವವರು ಹೇಳುವ ಹಾಗೆ ‘‘ಎಲ್ಲವೂ ಚೆನ್ನಾಗಿದೆ’’ ಆದರೆ ರಾಗಿ ಬೆಳೆಯುವ ಭೂಮಿ ಎಲ್ಲಿದೆ? ಬೆಳೆಯುವವರು ಎಲ್ಲಿದ್ದಾರೆ? ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಗಣನೀಯ ಕುಸಿಯುತ್ತಲೇ ಇದೆ. ನಮ್ಮದೇ ರಾಗಿ ಹೊಲ ಒಣಗಿ ಬಿರುಕುಬಿಟ್ಟು ನಿಂತಿದೆ. ರಾಗಿಯ ಆಸೆ ಮಾತ್ರ ಮನಸಲ್ಲಿ ಮೇರು ಪರ್ವತದಷ್ಟು ಬೆಳೆದು ನಿಂತಿದೆ.

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News