ಭೀಮಾ ಕೊರೆಗಾಂವ್ ಪ್ರಕರಣದ ತನಿಖೆ ಎನ್‌ಐಎಗೆ ಒಪ್ಪಿಸುವುದಿಲ್ಲ: ಉದ್ಧವ್ ಠಾಕ್ರೆ

Update: 2020-02-18 14:36 GMT

ಮುಂಬೈ, ಫೆ.18: ಭೀಮಾ ಕೊರೆಗಾಂವ್ ಪ್ರಕರಣದ ತನಿಖೆಯನ್ನು ಸರಕಾರವೇ ನಡೆಸಲಿದೆ. ಇದನ್ನು ಕೇಂದ್ರ ಸರಕಾರಕ್ಕೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಎಲ್ಗಾರ್ ಪರಿಷದ್ ಪ್ರಕರಣದ ತನಿಖೆಯನ್ನು ಮಾತ್ರ ಎನ್‌ಐಎಗೆ ಒಪ್ಪಿಸಲಾಗಿದೆ. ಎಲ್ಗಾರ್ ಪರಿಷದ್ ಮತ್ತು ಭೀಮಾ ಕೊರೆಗಾಂವ್ ಪ್ರತ್ಯೇಕ ಪ್ರಕರಣಗಳಾಗಿವೆ. ನಮ್ಮ ದಲಿತ ಸಹೋದರರು ಎದುರಿಸುತ್ತಿರುವ ಪ್ರಕರಣ ಭೀಮಾ ಕೊರೆಗಾಂವ್ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ದಲಿತ ಸಹೋದರರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಉದ್ಧವ್ ಠಾಕ್ರೆ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಎಲ್ಗಾರ್ ಪರಿಷದ್ ಪ್ರಕರಣದ ತನಿಖೆಯನ್ನು ಎನ್‌ಐಎ(ರಾಷ್ಟ್ರೀಯ ತನಿಖಾ ಸಮಿತಿ)ಗೆ ಒಪ್ಪಿಸಲು ಮಹಾರಾಷ್ಟ್ರ ಸರಕಾರ ಇತ್ತೀಚೆಗೆ ಸಮ್ಮತಿಸಿತ್ತು. ಆದರೆ ಇದಕ್ಕೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ತೀವ್ರ ಆಕ್ಷೇಪ ಸೂಚಿಸಿದ್ದರು. ಮಹಾರಾಷ್ಟ್ರದಲ್ಲಿ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್ ಪಕ್ಷಗಳನ್ನು ಒಳಗೊಂಡಿರುವ ಮಹಾವಿಕಾಸ ಅಘಾಡಿ ಸರಕಾರ ಅಧಿಕಾರದಲ್ಲಿದೆ. ಹೀಗಿರುವಾಗ ಮಿತ್ರ ಪಕ್ಷಗಳ ಆಕ್ಷೇಪವನ್ನು ಕಡೆಗಣಿಸಿ ಶಿವಸೇನೆ ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ಕೈಗೊಳ್ಳುವುದು ಸರಿಯಲ್ಲ ಎಂದು ಪವಾರ್ ಟೀಕಿಸಿದ್ದರು.

ಪುಣೆ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ಕೈಗೆತ್ತಿಕೊಳ್ಳುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಬೇಕೆಂಬ ತನ್ನ ಸಲಹೆಯನ್ನು ಮುಖ್ಯಮಂತ್ರಿ ತಿರಸ್ಕರಿಸಿದ್ದರು ಎಂದು ಎನ್‌ಸಿಪಿಯ ಮತ್ತೊಬ್ಬ ಮುಖಂಡ, ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿಕೆ ನೀಡಿದ್ದರು. ಹಿರಿಯ ಕಾಂಗ್ರೆಸ್ ಮುಖಂಡ, ಪಕ್ಷದ ಮಹಾರಾಷ್ಟ್ರ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ಕೂಡಾ ಠಾಕ್ರೆ ನಿರ್ಧಾರವನ್ನು ಟೀಕಿಸಿದ್ದು, ಮೈತ್ರಿಕೂಟದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದಿದ್ದರು. ಈ ಮಧ್ಯೆ ಸೋಮವಾರ ಹೇಳಿಕೆ ನೀಡಿದ್ದ ಎನ್‌ಸಿಪಿ, ಎಲ್ಗಾರ್ ಪರಿಷದ್ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ವಿಶೇಷ ತನಿಖಾ ತಂಡ(ಸಿಟ್)ದ ಮೂಲಕ ನಡೆಸಲಿದೆ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News