ಬ್ರಿಟಿಷ್ ಸಂಸದೆಯ ವೀಸಾ ರದ್ದು: ಭಾರತದ ಸ್ಪಷ್ಟನೆ

Update: 2020-02-18 14:40 GMT

ಹೊಸದಿಲ್ಲಿ, ಫೆ.17: ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಕೃತ್ಯದಲ್ಲಿ ಶಾಮೀಲಾಗಿದ್ದರಿಂದ ಬ್ರಿಟಿಷ್ ಸಂಸದೆ ಡೆಬೀ ಅಬ್ರಹಾಂ ಅವರ ಇ-ವೀಸಾ ರದ್ದುಗೊಳಿಸಲಾಗಿದೆ ಎಂದು ಭಾರತ ಸರಕಾರದ ಅಧಿಕಾರಿಗಳು ಹೇಳಿದ್ದಾರೆ. ಡೆಬೀ ಅಬ್ರಹಾಂಗೆ ನೀಡಲಾಗಿದ್ದ ಇ-ವೀಸಾವನ್ನು ಈ ಹಿಂದೆಯೇ ರದ್ದುಗೊಳಿಸಲಾಗಿತ್ತು. ಬಹುಷಃ ಅವರಿಗೆ ಸೋಮವಾರ ಇದು ಗೊತ್ತಾಗಿದೆ. ಅಲ್ಲದೆ , ವ್ಯವಹಾರಕ್ಕೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಳ್ಳಲು ನೀಡುವ ಇ-ವೀಸಾವನ್ನು ಕುಟುಂಬ ಅಥವಾ ಮಿತ್ರರ ಭೇಟಿಗೆ ಬಳಸಲು ಅವಕಾಶವಿಲ್ಲ. ವೀಸಾ ನೀಡುವುದು, ತಿರಸ್ಕರಿಸುವುದು, ರದ್ದುಗೊಳಿಸುವುದು ಯಾವುದೇ ದೇಶದ ಸಾರ್ವಭೌಮ ಹಕ್ಕಾಗಿದೆ. ನಿಯಮದಂತೆ, ಅವರು ಮತ್ತೆ ವೀಸಾಕ್ಕೆ ಅರ್ಜಿ ಸಲ್ಲಿಸಿದರೆ ಪರಿಶೀಲಿಸಬಹುದು. ಡೆಬೀ ಅಬ್ರಹಾಂ ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿಯನ್ನು ಕಟುವಾಗಿ ಟೀಕಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಭಾರತಕ್ಕೆ ಭೇಟಿ ನೀಡಲು ದಿಲ್ಲಿ ವಿಮಾನನಿಲ್ದಾಣಕ್ಕೆ ಆಗಮಿಸಿದ್ದ ತನಗೆ ಭಾರತ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ. ತನ್ನಲ್ಲಿದ್ದ ಇ-ವೀಸಾವನ್ನು ತಿರಸ್ಕರಿಸಿದ್ದು ತನ್ನನ್ನು ಗಡೀಪಾರು ಕೋಣೆಗೆ ಕಳಿಸಿದ್ದಾರೆ ಎಂದು ಬ್ರಿಟಿಷ್ ಸಂಸದೆ ಡೆಬೀ ಅಬ್ರಹಾಮ್ಸ್ ಸೋಮವಾರ ಹೇಳಿದ್ದರು. ‘ಆಲ್ ಪಾರ್ಟಿ ಪಾರ್ಲಿಮೆಂಟರಿ ಗ್ರೂಫ್ ಫಾರ್ ಕಾಶ್ಮೀರ’ದ ಅಧ್ಯಕ್ಷೆಯೂ ಆಗಿರುವ ಡೆಬೀ, ಕಾಶ್ಮೀರ ವಿಷಯದಲ್ಲಿ ಭಾರತ ಸರಕಾರದ ನಿಲುವನ್ನು ಟೀಕಿಸುತ್ತಲೇ ಬಂದಿದ್ದಾರೆ. ಕಳೆದ ವರ್ಷದ ಆಗಸ್ಟ್ 5ರಂದು 370ನೇ ವಿಧಿಯನ್ನು ಭಾರತ ಸರಕಾರ ರದ್ದುಗೊಳಿಸಿರುವುದನ್ನು ವಿರೋಧಿಸಿ ಮತ್ತು ಈ ನಿರ್ಧಾರದ ಬಗ್ಗೆ ತೀವ್ರ ಆತಂಕವನ್ನು ವ್ಯಕ್ತಪಡಿಸಿ ಬ್ರಿಟನ್‌ನಲ್ಲಿರುವ ಭಾರತೀಯ ರಾಯಭಾರಿಗೆ ಟ್ವಿಟರ್ ಮೂಲಕ ಪತ್ರವನ್ನು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News