ಪ್ರಮಾಣಪತ್ರ ಪ್ರಕರಣ: ಫಡ್ನವೀಸ್ ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದ ಸುಪ್ರೀಂ

Update: 2020-02-18 14:42 GMT

ಹೊಸದಿಲ್ಲಿ, ಫೆ.18: ಪ್ರಮಾಣಪತ್ರದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸದಿರು ವಆರೋಪಕ್ಕೆ ಸಂಬಂಧಿಸಿ ನ್ಯಾಯಾಲಯ ನೀಡಿದ್ದ ತೀರ್ಪಿನ ಮರುಪರಿಶೀಲನೆ ಕೋರಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಲ್ಲಿಸಿದ್ದ ಅರ್ಜಿಯ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.

2014ರ ಚುನಾವಣೆ ಸಂದರ್ಭ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ತನ್ನ ವಿರುದ್ಧ ವಿಚಾರಣೆಗೆ ಬಾಕಿ ಇರುವ 2 ಕ್ರಿಮಿನಲ್ ಪ್ರಕರಣಗಳನ್ನು ಫಡ್ನವೀಸ್ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಆರೋಪಿಸಲಾಗಿದೆ. ಫಡ್ನವೀಸ್ ವಿರುದ್ಧ 1996 ಮತ್ತು 1998ರಲ್ಲಿ ಮೋಸ ಮತ್ತು ಫೋರ್ಜರಿ ಪ್ರಕರಣ ದಾಖಲಾಗಿತ್ತು. ಆದರೆ 2014ರಲ್ಲಿ ಸಲ್ಲಿಸಿದ್ದ ಚುನಾವಣಾ ಪ್ರಮಾಣಪತ್ರದಲ್ಲಿ ಅವರು ಇದನ್ನು ಉಲ್ಲೇಖಿಸಿಲ್ಲ.

ಆದ್ದರಿಂದ ಅವರ ವಿರುದ್ಧ ಕ್ರಿಮಿನಲ್ ಖಟ್ಲೆ ಹೂಡಬೇಕು ಎಂದು ಸತೀಶ್ ಯುಕೆ ಎಂಬವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಫಡ್ನವೀಸ್‌ಗೆ ಕ್ಲೀನ್‌ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ, ಹೈಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿತ್ತು ಮತ್ತು ಫಡ್ನವೀಸ್ ವಿಚಾರಣೆ ಎದುರಿಸಬೇಕು ಎಂದು ಆದೇಶಿಸಿತ್ತು. ಈ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಫಡ್ನವೀಸ್ ಅರ್ಜಿ ಸಲ್ಲಿಸಿದ್ದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News