ಭಾರತದಲ್ಲಿ ಬಡವರ ಸಂಖ್ಯೆ ಕೇವಲ 8.4 ಕೋಟಿ : ನೂತನ ಅಧ್ಯಯನ ವರದಿ

Update: 2020-02-18 15:01 GMT
file photo

ಹೊಸದಿಲ್ಲಿ,ಫೆ.18: ಭಾರತದಲ್ಲಿ 2011ರಲ್ಲಿ 27 ಕೋಟಿಗಳಷ್ಟಿದ್ದ ಬಡವರ ಸಂಖ್ಯೆಗೆ ಹೋಲಿಸಿದರೆ 2017ರಲ್ಲಿ ಇದ್ದಂತೆ ದೇಶದಲ್ಲಿ ಕೇವಲ 8.4 ಕೋ.ಬಡವರಿದ್ದಾರೆ ಎಂದು ನೂತನ ಅಧ್ಯಯನವೊಂದು ಹೇಳಿದೆ.

 2011ರಲ್ಲಿ ತೆಂಡುಲ್ಕರ್ ಬಡತನ ರೇಖೆಯಂತೆ ಶೇ.14.9ರಷ್ಟಿದ್ದ ಬಡತನ ಪ್ರಮಾಣವು 2017ರಲ್ಲಿ ಶೇ.7ಕ್ಕೆ ಇಳಿದಿದ್ದು,ಇದು ದೇಶದ ಇತಿಹಾಸದಲ್ಲಿಯೇ ಅತ್ಯಂತ ತ್ವರಿತ ಗತಿಯಲ್ಲಿ ಬಡತನ ಇಳಿಕೆ ದರವಾಗಿದೆ ಎಂದೂ ಅಧ್ಯಯನ ವರದಿಯು ತಿಳಿಸಿದೆ. ವಿವಾದಾತ್ಮಕ ತೆಂಡುಲ್ಕರ್ ಬಡತನ ರೇಖೆಯನ್ವಯ ದಿನವೊಂದಕ್ಕೆ 33 ರೂ.ಗೂ ಕಡಿಮೆ ಆದಾಯವಿರುವವರನ್ನು ‘ಬಡವರು’ ಎಂದು ಪರಿಗಣಿಸಲಾಗುತ್ತದೆ. ಸುರ್ಜಿತ ಎಸ್.ಭಲ್ಲಾ,ಅರವಿಂದ ವಿರ್ಮಾನಿ ಮತ್ತು ಕರಣ ಭಾಸಿನ್ ಅವರು ಜಂಟಿಯಾಗಿ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ (ಎನ್‌ಸಿಇಎಆರ್)ಗೆ ಸಲ್ಲಿಸಿರುವ ‘ಭಾರತದಲ್ಲಿ ಬಡತನ,ಅಸಮಾನತೆ ಮತ್ತು ಅಂತರ್ಗತ ಬೆಳವಣಿಗೆ:2011/12-2017/18’ ಅಧ್ಯಯನ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.

2017ರಲ್ಲಿ ಭಾರತದ ನಿಜವಾದ ತಲಾದಾಯವು 2011ರಲ್ಲಿದ್ದ ಪ್ರಮಾಣಕ್ಕಿಂತ ಇಳಿಕೆಯಾಗಿದೆ ಎಂದು ಬೆಟ್ಟು ಮಾಡಿರುವ ವಿವಾದಾತ್ಮಕ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಕಚೇರಿ (ಎನ್‌ಎಸ್‌ಎಸ್‌ಒ)ಯ ಬಳಕೆ ವೆಚ್ಚ ಸಮೀಕ್ಷೆಯು ಮೂಲೆಗುಂಪಾಗಿರುವ ನಡುವೆಯೇ ನೂತನ ಅಧ್ಯಯನ ವರದಿಯು ಬಂದಿದೆ. 2017ರಲ್ಲಿ ದೇಶದಲ್ಲಿ ಬಡತನವು 2011ರಲ್ಲಿ ಇದ್ದ ಪ್ರಮಾಣಕ್ಕಿಂತ ಹೆಚ್ಚಾಗಿರಬಹುದು ಎಂದೂ ಎನ್‌ಎಸ್‌ಎಸ್‌ಒ ಸಮೀಕ್ಷೆಯು ಅರ್ಥೈಸಿತ್ತು. ಎನ್‌ಎಸ್‌ಎಸ್‌ಒ ದತ್ತಾಂಶವು ತಲಾ ಬಳಕೆಯಲ್ಲಿ ಶೇ.12ರಷ್ಟು ಕುಸಿತವನ್ನು ತೋರಿಸಿದ್ದರೆ ನ್ಯಾಷನಲ್ ಅಕೌಂಟ್ಸ್‌ನ ದತ್ತಾಂಶವು ಇದಕ್ಕೆ ತದ್ವಿರುದ್ಧವಾಗಿದ್ದು,ಶೇ.5.5ರಷ್ಟು ಏರಿಕೆಯನ್ನು ತೋರಿಸಿದೆ.

 ಬಡತನ ಪ್ರಮಾಣವು ತ್ವರಿತವಾಗಿ ಇಳಿಕೆಯಾಗಿರುವುದಕ್ಕೆ ಹೆಚ್ಚಿನ ಪ್ರಗತಿ ದರ ಹಾಗೂ ನರೇಗಾ,ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ,ಪ್ರಧಾನ ಮಂತ್ರಿ ಕಿಸಾನ್ ಯೋಜನೆ,ಎಲ್‌ಪಿಜಿ ಸಬ್ಸಿಡಿ ಇತ್ಯಾದಿಗಳಂತಹ ಸರಕಾರದ ಕ್ರಮಗಳು ಕಾರಣವಾಗಿವೆ ಎಂದೂ ನೂತನ ಅಧ್ಯಯನ ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News