ಚೀನಾದಿಂದ ಪೂರೈಕೆಗಳ ಕುರಿತು ಹಲವಾರು ಕ್ಷೇತ್ರಗಳಲ್ಲಿ ಕಳವಳ:ನಿರ್ಮಲಾ ಸೀತಾರಾಮನ್

Update: 2020-02-18 15:49 GMT

ಹೊಸದಿಲ್ಲಿ,ಫೆ.18: ಕೊರೋನ ವೈರಸ್ ಪಿಡುಗಿನಿಂದಾಗಿ ಆರ್ಥಿಕ ಪರಿಣಾಮಗಳ ಕುರಿತು ಹೆಚ್ಚುತ್ತಿರುವ ಭೀತಿಯ ನಡುವೆಯೇ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ಚೀನಾದಿಂದ ಪೂರೈಕೆಗಳ ಕುರಿತು ಹಲವಾರು ಕ್ಷೇತ್ರಗಳು ಕಳವಳಗೊಂಡಿವೆ ಎಂದು ಮಂಗಳವಾರ ಇಲ್ಲಿ ಹೇಳಿದರು.

ಚೀನಾದಿಂದ ಕಚ್ಚಾ ಸಾಮಗ್ರಿಗಳ ಪೂರೈಕೆಯೊಂದಿಗೆ ಆಮದು ಮತ್ತು ರಫ್ತು ಸ್ಥಿತಿಯ ಬಗ್ಗೆಯೂ ಕಳವಳ ಸೃಷ್ಟಿಯಾಗಿದೆ ಎಂದೂ ಹೇಳಿದ ಅವರು,ವೈರಸ್‌ನಿಂದಾಗಿ ಕೆಲ ವ್ಯತ್ಯಯಗಳ ಬಗ್ಗೆ ಔಷಧಿ,ಸೌರ ಮತ್ತು ರಾಸಾಯನಿಕ ಕೈಗಾರಿಕೆಗಳ ಪ್ರತಿನಿಧಿಗಳು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಆಮದು ಮತ್ತು ರಫ್ತಿಗೆ ಸಂಬಂಧಿಸಿದಂತೆ ಸಂವಾದ ಕಾರ್ಯಕ್ರಮವೊಂದರ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೀತಾರಾಮನ್,ದೇಶಿಯ ಉದ್ಯಮರಂಗದ ಮೇಲೆ ಕೊರೋನ ವೈರಸ್ ಪಿಡುಗಿನ ಪರಿಣಾಮವನ್ನು ನಿಭಾಯಿಸಲು ವಿತ್ತ ಸಚಿವಾಲಯವು ಕ್ರಮಗಳನ್ನು ಪ್ರಕಟಿಸಲಿದೆ ಎಂದು ತಿಳಿಸಿದರು.

ಬುಧವಾರ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳ ಸಭೆಯನ್ನು ತಾನು ಕರೆದಿದ್ದು,ಬಳಿಕ ಪ್ರಧಾನಿ ಕಚೇರಿಯೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮಗಳನ್ನು ಪ್ರಕಟಿಸಲಾಗುವುದು ಎಂದರು.

ಕೊರೋನ ವೈರಸ್‌ನಿಂದಾಗಿ ಬೆಲೆ ಏರಿಕೆಯ ಯಾವುದೇ ಕಳವಳಗಳು ಈವರೆಗೆ ವ್ಯಕ್ತವಾಗಿಲ್ಲ ಎಂದ ಸೀತಾರಾಮನ್,ಮೇಕ್ ಇನ್ ಇಂಡಿಯಾ ಉಪಕ್ರಮದ ಮೇಲೆ ಕೊರೋನ ವೈರಸ್ ಪಿಡುಗಿನ ಪರಿಣಾಮದ ಕುರಿತು ಮಾತನಾಡಲು ಕಾಲವಿನ್ನೂ ಪಕ್ವಗೊಂಡಿಲ್ಲ. ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ಕೊರತೆ ವರದಿಯಾಗಿಲ್ಲ,ಬದಲಿಗೆ ಕೆಲವು ವಸ್ತುಗಳ ರಫ್ತುಗಳ ಮೇಲಿನ ನಿಷೇಧವನ್ನು ರದ್ದುಗೊಳಿಸುವಂತೆ ಔಷಧ ಉದ್ಯಮವು ಕೋರಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News