ಪುಲ್ವಾಮ ದಾಳಿ: ಮೃತ ಯೋಧರ ಹೆಸರುಗಳು, ತನಿಖಾ ವರದಿ ಬಹಿರಂಗಪಡಿಸಲು ಕೇಂದ್ರ ಸರಕಾರ ನಕಾರ

Update: 2020-02-18 17:27 GMT

ಪಾಣಿಪಾತ್, ಫೆ. 18: ಕಳೆದ ವರ್ಷ ಫೆಬ್ರವರಿ 14ರಂದು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ 40 ಯೋಧರ ಸಾವಿಗೆ ಕಾರಣವಾದ ಪುಲ್ವಾಮ ಭಯೋತ್ಪಾದಕ ದಾಳಿಯ ತನಿಖಾ ವರದಿ ಬಹಿರಂಗಪಡಿಸಲು ಕೇಂದ್ರ ಸರಕಾರ ನಿರಾಕರಿಸಿದೆ.

 ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಯೋಧರು ಮೃತಪಟ್ಟ ಬಗ್ಗೆ ಮಾಹಿತಿ ಕೋರಿ ಪಾಣಿಪತ್ ಮೂಲದ ಆರ್‌ಟಿಐ ಕಾರ್ಯಕರ್ತ ಪಿ.ಪಿ. ಕಪೂರ್ ಮನವಿ ಸಲ್ಲಿಸಿದ್ದರು. ಆದರೆ, ಈ ಮನವಿಗೆ ಮಾಹಿತಿ ನೀಡಲು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ. ಯೋಧರ ಹೆಸರು ಬಹಿರಂಗಪಡಿಸಲು ಅಥವಾ ಅವರನ್ನು ಹುತಾತ್ಮರನ್ನು ಎಂದು ಪರಿಗಣಿಸಲಾಗಿದೆಯೇ ? ಇಲ್ಲವೇ ? ಎಂಬುದರ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರಕಾರ ನಿರಾಕರಿಸಿದೆ. ಮೃತಪಟ್ಟ ಯೋಧರ ಕುಟುಂಬಕ್ಕೆ ನೀಡಲಾದ ಎಲ್ಲಾ ವಿಧದ ನೆರವುಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಕೂಡ ಅದು ನಿರಾಕರಿಸಿದೆ.

ಪಿ.ಪಿ. ಕಪೂರ್ ಅವರು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಸಿಆರ್‌ಪಿಎಫ್‌ನ ಪ್ರಧಾನ ನಿರ್ದೇಶಕರಿಗೆ ಎರಡು ಭಿನ್ನ ಅರ್ಜಿಗಳನ್ನು ಜನವರಿ 9 ಹಾಗೂ 10ರಂದು ಸಲ್ಲಿಸಿದ್ದರು. ಮೃತಪಟ್ಟ ಯೋಧನ ಹೆಸರು ಹಾಗೂ ಪದನಾಮ, ತನಿಖಾ ವರದಿಯ ಪ್ರತಿ ಹಾಗೂ ತನಿಖೆಯಲ್ಲಿ ತಪ್ಪೆಸಗಿದ ಅಧಿಕಾರಿಗಳ ಮಾಹಿತಿ ಸೇರಿದಂತೆ ಐದು ಅಂಶಗಳ ಮಾಹಿತಿಯನ್ನು ಅವರು ಕೋರಿದ್ದರು. ಸಿಆರ್‌ಪಿಎಫ್ ನಿರ್ದೇಶನಾಲಯ (ಆಡಳಿತ)ದ ಡಿಐಜಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ರಾಕೇಶ್ ಸೇಥಿ ಅವರು ತನ್ನ 2020 ಜನವರಿಯ ಪ್ರತಿಕ್ರಿಯೆಯಲ್ಲಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಅಧ್ಯಾಯ-6ರ ಪ್ಯಾರಾ-24 (1)ರ ನಿಯಮದಂತೆ ಮಾಹಿತಿ ನೀಡದೇ ಇರುವುದಕ್ಕೆ ಭ್ರಷ್ಟಾಚಾರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಹೊರತುಪಡಿಸಿ ಯಾವುದೇ ರೀತಿಯ ಮಾಹಿತಿಗಳನ್ನು ನೀಡುವುದರಿಂದ ಸಿಆರ್‌ಪಿಎಫ್‌ಗೆ ವಿನಾಯತಿ ಇರುವುದೇ ಮುಖ್ಯ ಕಾರಣ ಎಂದು ಸಿಆರ್‌ಪಿಎಫ್ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದೆ ಎಂದು ಕಪೂರ್ ಹೇಳಿದ್ದಾರೆ.

‘‘ಕೇಂದ್ರ ಸರಕಾರ ತನ್ನ ವಿಫಲತೆ ಮರೆಮಾಚಲು ಬಯಸುತ್ತಿದೆ. ಒಂದೆಡೆ ದೇಶವನ್ನು ರಕ್ಷಿಸಲು 40 ಭಾರತೀಯ ಯೋಧರು ಪ್ರಾಣ ಅರ್ಪಿಸಿದರು ಎಂದು ಹೇಳುತ್ತದೆ. ಇನ್ನೊಂದೆಡೆ ಯೋಧರ ಹೆಸರನ್ನು ಉಲ್ಲೇಖಿಸಲು ಕೂಡ ಸರಕಾರ ಸಿದ್ಧರಿಲ್ಲ’’ ಎಂದು ಅವರು ಹೇಳಿದ್ದಾರೆ. ಪುಲ್ವಾಮ ದಾಳಿ ನೇರವಾಗಿ ಭ್ರಷ್ಟಾಚಾರ ಹಾಗೂ ಸಿಆರ್‌ಪಿಎಫ್ ಯೋಧರ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ. ಆದುದರಿಂದ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ. ವರದಿಯಾಗಿರುವುದಕ್ಕಿಂತ ಹೆಚ್ಚಿನ ಯೋಧರು ಮೃತಪಟ್ಟಿರುವುದೇ ಮಾಹಿತಿ ನೀಡದೇ ಇರಲು ಕಾರಣವಿರಬಹುದು ಎಂದು ಕಪೂರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News