'ದಿಟ್ಟ ತೀರ್ಪುಗಳಿಗೆ' ಹೆಸರಾದ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಮುರಳೀಧರ್ ವರ್ಗಾವಣೆಗೆ ಸುಪ್ರೀಂ ಶಿಫಾರಸು

Update: 2020-02-19 13:24 GMT

ಹೊಸದಿಲ್ಲಿ: ದಿಲ್ಲಿ ಹೈಕೋರ್ಟಿನ ಮೂರನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ಹಾಗೂ 'ದಿಟ್ಟ ತೀರ್ಪು'ಗಳನ್ನು ನೀಡುವವರೆಂದು ಖ್ಯಾತರಾಗಿರುವ ಜಸ್ಟಿಸ್ ಎಸ್. ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿಗೆ ವರ್ಗಾಯಿಸಲು ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

ಜಸ್ಟಿಸ್ ಮುರಳೀಧರ್ ಅವರನ್ನು ವರ್ಗಾವಣೆಗೊಳಿಸುವ ಕುರಿತಂತೆ ಈ ಹಿಂದೆ ಡಿಸೆಂಬರ್ 2018ರಲ್ಲಿ ಹಾಗೂ ಜನವರಿ 2019ರಲ್ಲಿ ಕೂಡ ಎರಡು ಬಾರಿ ಚರ್ಚೆಗಳು ನಡೆದಿತ್ತಾದರೂ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಕೊಲೀಜಿಯಂನ ಹಲವು ನ್ಯಾಯಾಧೀಶರು ವಿರೋಧಿಸಿದ ನಂತರ ಪ್ರಸ್ತಾಪ ಕೈಬಿಡಲಾಗಿತ್ತು.

ಮುರಳೀಧರ್ ಅವರ ವರ್ಗಾವಣೆ ಕುರಿತಾದ ಶಿಫಾರಸಿನ ಬಗ್ಗೆ ದಿಲ್ಲಿ ಹೈಕೋರ್ಟ್ ಬಾರ್ ಅಸೋಸಿಯೇಶನ್ ಆಘಾತ ವ್ಯಕ್ತಪಡಿಸಿದೆ ಹಾಗೂ ಅದನ್ನು ಖಂಡಿಸುವುದಾಗಿ ಹೇಳಿದೆ.

ದಿಲ್ಲಿ ಹೈಕೋರ್ಟಿಗೆ 2006ರಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಜಸ್ಟಿಸ್ ಮುರಳೀಧರ್ 2023ರಲ್ಲಿ ನಿವೃತ್ತರಾಗಲಿದ್ದಾರೆ. ಹಶೀಂಪುರ ನರಮೇಧ ಪ್ರಕರಣದಲ್ಲಿ ಉತ್ತರ ಪ್ರದೇಶ ಪಿಎಸಿ ಸದಸ್ಯರನ್ನು ಹಾಗೂ ಕಾಂಗ್ರೆಸ್ ನಾಯಕ  ಸಜ್ಜನ್ ಕುಮಾರ್ ಅವರನ್ನು 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ದೋಷಿಯೆಂದು ತೀರ್ಪು ನೀಡಿದವರಾಗಿದ್ದಾರೆ ಜಸ್ಟಿಸ್ ಮುರಳೀಧರ್.

2009ರ ನಾಝ್ ಫೌಂಡೇಶನ್ ಪ್ರಕರಣದಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂಬ ತೀರ್ಪು ನೀಡಿದ ದಿಲ್ಲಿ ಹೈಕೋರ್ಟ್ ಪೀಠದ ಭಾಗವಾಗಿದ್ದರು ಮುರಳೀಧರ್. ಎಷ್ಟು ನ್ಯಾಯಾಧೀಶರು ತಮ್ಮ ಆಸ್ತಿ ಘೋಷನೆ ಮಾಡಿದ್ದಾರೆಂದು  ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಿಂದ ಮಾಹಿತಿ ಕೋರಿದ್ದ ಆರ್‍ಟಿಐ ಅರ್ಜಿದಾರರ ಪರ ತೀರ್ಪನ್ನು ನೀಡಿದ್ದ 2010ರ ದಿಲ್ಲಿ ಹೈಕೋರ್ಟ್ ಪೀಠದಲ್ಲೂ ಅವರಿದ್ದರು.

ನ್ಯಾಯಾಧೀಶರನ್ನು `ಮೈ ಲಾರ್ಡ್, ' ಯುವರ್ ಲಾರ್ಡ್ ಶಿಪ್' ಎಂದು ಸಂಬೋಧಿಸುವ ಪರಿಪಾಠವನ್ನು ಅಂತ್ಯಗೊಳಿಸಿದ ಕೆಲವೇ ಕೆಲವು ನ್ಯಾಯಾಧೀಶರಲ್ಲಿ ಜಸ್ಟಿಸ್ ಮುರಳೀಧರ್ ಒಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News