ಕೆಳ ನ್ಯಾಯಾಲಯಗಳ ನ್ಯಾಯಾಧೀಶರು ಡಿಜೆ ಹುದ್ದೆಗೆ ನೇರ ನೇಮಕಾತಿಗೆ ಅರ್ಹರಲ್ಲ: ಸುಪ್ರೀಂ

Update: 2020-02-19 14:26 GMT

ಹೊಸದಿಲ್ಲಿ,ಫೆ.19: ಕೆಳ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವವರು ನೇರ ಭರ್ತಿಯ ಮೂಲಕ ಜಿಲ್ಲಾ ನ್ಯಾಯಾಧೀಶ (ಡಿಜೆ) ಹುದ್ದೆಗೆ ನೇಮಕಗೊಳ್ಳಲು ಅರ್ಹರಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ಸ್ಪಷ್ಟಪಡಿಸಿದೆ.

ನೇರಭರ್ತಿಯ ಮೂಲಕ ಜಿಲ್ಲಾ ನ್ಯಾಯಾಧೀಶರ ಹುದ್ದೆಗಳು ಕನಿಷ್ಠ ಏಳು ವರ್ಷಗಳ ನಿರಂತರ ವಕೀಲಿ ಅನುಭವವನ್ನು ಹೊಂದಿರುವ ಮತ್ತು ಉಚ್ಚ ನ್ಯಾಯಾಲಯದಿಂದ ಶಿಫಾರಸುಗೊಂಡ ವಕೀಲರಿಗೆ ಮಾತ್ರ ಸೀಮಿತವಾಗಿವೆ ಎಂದು ನ್ಯಾ.ಅರುಣ್ ಮಿಶ್ರಾ ನೇತೃತ್ವದ ಪೀಠವು ತಿಳಿಸಿತು.

  ಸಂವಿಧಾನದ ವಿಧಿ 233ರ ಉಪನಿಯಮ 2ನ್ನು ವ್ಯಾಖ್ಯಾನಿಸಿದ ಪೀಠವು,ನ್ಯಾಯಾಂಗ ಸೇವೆಯಲ್ಲಿರುವವರನ್ನು ನೇರ ಭರ್ತಿಯಲ್ಲಿ ಜಿಲ್ಲಾ ನ್ಯಾಯಾಧೀಶರನ್ನಾಗಿ ನೇಮಕಗೊಳಿಸುವುದನ್ನು ಈ ಉಪನಿಯಮವು ನಿಷೇಧಿಸಿದೆ. ಈಗಾಗಲೇ ಕೇಂದ್ರ ಅಥವಾ ರಾಜ್ಯ ಸರಕಾರದ ಸೇವೆಯಲ್ಲಿರುವ ವ್ಯಕ್ತಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹನಲ್ಲ ಎಂದು ಈ ಉಪನಿಯಮವು ಹೇಳುತ್ತದೆ ಎಂದ ಪೀಠವು,ಆದರೆ ಕೆಳ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಭಡ್ತಿಯ ಮೂಲಕ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಪರಿಗಣಿಸಬಹುದಾಗಿದೆ ಎಂದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News