‘ಸಂಝೋತಾ ಎಕ್ಸ್‌ಪ್ರೆಸ್’ ಸ್ಫೋಟದ ಸಂತ್ರಸ್ತರು ಈಗಲೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ: ಪಾಕ್

Update: 2020-02-19 14:35 GMT
ಫೈಲ್ ಚಿತ್ರ

ಇಸ್ಲಾಮಾಬಾದ್, ಫೆ. 19: ‘ಸಂಝೋತಾ ಎಕ್ಸ್‌ಪ್ರೆಸ್’ ಸ್ಫೋಟದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನ ಮಂಗಳವಾರ ಭಾರತವನ್ನು ಒತ್ತಾಯಿಸಿದೆ ಹಾಗೂ ಸ್ಫೋಟದ ಸಂತ್ರಸ್ತರು ‘ನ್ಯಾಯಕ್ಕಾಗಿ’ ನಿರಂತರವಾಗಿ ಕಾಯುತ್ತಿದ್ದಾರೆ ಎಂದು ಹೇಳಿದೆ.

ಹದಿಮೂರು ವರ್ಷಗಳ ಹಿಂದೆ ಫೆಬ್ರವರಿ 18ರಂದು ದಿಲ್ಲಿಯಿಂದ ಲಾಹೋರ್‌ಗೆ ಹೋಗುತ್ತಿದ್ದ ರೈಲಿನಲ್ಲಿ ಸ್ಫೋಟಗಳು ಸಂಭವಿಸಿ 68 ಪ್ರಯಾಣಿಕರು ಸಾವಿಗೀಡಾದರು ಹಾಗೂ ಈ ಪೈಕಿ 40ಕ್ಕೂ ಅಧಿಕ ಮಂದಿ ಪಾಕಿಸ್ತಾನಿ ರಾಷ್ಟ್ರೀಯರು ಎಂದು ಪಾಕಿಸ್ತಾನದ ವಿದೇಶ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸ್ಫೋಟದಲ್ಲಿ ಶಾಮೀಲಾದವರನ್ನು ಆದಷ್ಟು ಬೇಗ ಕಾನೂನಿನ ಕಟಕಟೆಗೆ ತರಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನದ ವಿದೇಶ ಕಚೇರಿಯು ಭಾರತ ಸರಕಾರವನ್ನು ಒತ್ತಾಯಿಸಿದೆ.

2007 ಫೆಬ್ರವರಿ 18ರಂದು ರೈಲು ಅಮೃತಸರದಲ್ಲಿರುವ ಅಟ್ಟಾರಿಗೆ ಹೋಗುತ್ತಿದ್ದಾಗ ಹರ್ಯಾಣದ ಪಾಣಿಪತ್ ಸಮೀಪ ಸ್ಫೋಟ ಸಂಭವಿಸಿತು. ಅಟ್ಟಾರಿಯು ಭಾರತದಲ್ಲಿರುವ ಕೊನೆಯ ನಿಲ್ದಾಣವಾಗಿದೆ.

ಪಂಚ್‌ಕುಳದ ವಿಶೇಷ ನ್ಯಾಯಾಲಯವೊಂದು ಕಳೆದ ವರ್ಷ ಪ್ರಕರಣದ ಎಲ್ಲ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ನಬ ಕುಮಾರ್ ಸರ್ಕಾರ್ ಯಾನೆ ಸ್ವಾಮಿ ಅಸೀಮಾನಂದ, ಲೋಕೇಶ್ ಶರ್ಮ, ಕಮಲ್ ಚೌಹಾಣ್ ಮತ್ತು ರಾಜಿಂದರ್ ಚೌಧರಿ ಪ್ರಕರಣದ ಆರೋಪಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News