ಚೀನಾದ ಸರಕಾರಿ ಮಾದ್ಯಮಗಳ ಮೇಲೆ ಅಮೆರಿಕ ನಿರ್ಬಂಧ

Update: 2020-02-19 15:04 GMT

ವಾಶಿಂಗ್ಟನ್, ಫೆ. 19: ಚೀನಾದ ಸರಕಾರಿ ಮಾಧ್ಯಮ ಸಂಸ್ಥೆಗಳನ್ನು ವಿದೇಶಿ ಸಂಘಟನೆಗಳು ಎಂಬುದಾಗಿ ಪರಿಗಣಿಸುವುದಾಗಿ ಅಮೆರಿಕ ಮಂಗಳವಾರ ಹೇಳಿದೆ ಹಾಗೂ ಅವುಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದೆ.

ಕ್ಸಿನುವಾ ಸುದ್ದಿ ಸಂಸ್ಥೆ ಮತ್ತು ಚೀನಾ ಗ್ಲೋಬಲ್ ಟೆಲಿವಿಶನ್ ನೆಟ್‌ವರ್ಕ್ ಸೇರಿದಂತೆ ಚೀನಾದ 5 ಮಾಧ್ಯಮ ಸಂಸ್ಥೆಗಳು ಇನ್ನು ಅಮೆರಿಕದಲ್ಲಿ ಜಮೀನು ಅಥವಾ ಕಟ್ಟಡಗಳನ್ನು ಖರೀದಿಸಲು ಅಮೆರಿಕದ ವಿದೇಶಾಂಗ ಇಲಾಖೆಯ ಅನುಮತಿ ಪಡೆಯಬೇಕಾಗಿದೆ ಹಾಗೂ ಅಮೆರಿಕನ್ನರು ಸೇರಿದಂತೆ ತಮ್ಮಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳ ವಿವರಗಳನ್ನು ನೀಡಬೇಕಾಗಿದೆ. ಅಮೆರಿಕದಲ್ಲಿ ಈ ಮಾಧ್ಯಮಗಳ ಪತ್ರಿಕೋದ್ಯಮ ಚಟುವಟಿಕೆಗಳನ್ನು ನಿರ್ಬಂಧಿಸುವುದಿಲ್ಲ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಅಮೆರಿಕದ ನಿರ್ಬಂಧಕ್ಕೆ ಒಳಗಾದ ಚೀನಾದ ಇತರ ಮಾಧ್ಯಮಗಳೆಂದರೆ ಚೀನಾ ರೇಡಿಯೊ ಇಂಟರ್‌ನ್ಯಾಶನಲ್, ಪೀಪಲ್ಸ್ ಡೇಲಿ ಮತ್ತು ಇಂಗ್ಲಿಷ್ ಭಾಷೆಯ ಚೀನಾ ಡೇಲಿ.

ಸ್ವೀಕಾರಾರ್ಹವಲ್ಲ: ಚೀನಾ

ಚೀನಾದ ಸರಕಾರಿ ಮಾಧ್ಯಮ ಸಂಸ್ಥೆಗಳ ಮೇಲೆ ನಿರ್ಬಂಧ ವಿಧಿಸುವ ಹಾಗೂ ಅವುಗಳನ್ನು ವಿದೇಶಿ ಸಂಘಟನೆಗಳು ಎಂಬುದಾಗಿ ಪರಿಗಣಿಸುವ ಅಮೆರಿಕದ ನಿರ್ಧಾರವನ್ನು ಚೀನಾ ಬುಧವಾರ ಖಂಡಿಸಿದೆ.

‘‘ಅಮೆರಿಕದ ಈ ಕ್ರಮಕ್ಕೆ ಸಮರ್ಥನೆಯಿಲ್ಲ ಹಾಗೂ ಸ್ವೀಕಾರಾರ್ಹವಲ್ಲ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ.

ಚೀನಾ: ‘ವಾಲ್‌ಸ್ಟ್ರೀಟ್ ಜರ್ನಲ್’ ಪತ್ರಕರ್ತರಿಗೆ ನಿಷೇಧ

ಅಮೆರಿಕದ ಪತ್ರಿಕೆ ‘ವಾಲ್ ಸ್ಟ್ರೀಟ್ ಜರ್ನಲ್’ನ ಸಂಪಾದಕೀಯದಲ್ಲಿ ಚೀನಾದ ವಿರುದ್ಧ ‘ಜನಾಂಗೀಯ ತಾರತಮ್ಯ’ದ ಭಾಷೆಯನ್ನು ಬಳಸಿರುವುದಕ್ಕಾಗಿ ಆ ಪತ್ರಿಕೆಯ ಮೂವರು ವರದಿಗಾರರಿಗೆ ನೀಡಲಾಗಿರುವ ಮಾನ್ಯತೆಯನ್ನು ಹಿಂದಕ್ಕೆ ಪಡೆದುಕೊಂಡಿರುವುದಾಗಿ ಚೀನಾ ಬುಧವಾರ ಹೇಳಿದೆ.

‘ಚೀನಾವು ಏಶ್ಯದ ನಿಜವಾದ ಕಾಯಿಲೆಪೀಡಿತ ವ್ಯಕ್ತಿ’ ಎಂಬ ತಲೆಬರಹದ ಸಂಪಾದಕೀಯವು ‘ಜನಾಂಗೀಯ ತಾರತಮ್ಯ’ದಿಂದ ಕೂಡಿದೆ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದರು. ಹಾಗೂ ಕ್ಷಮೆ ಕೋರದಿರುವುದಕ್ಕಾಗಿ ಅವರು ಪತ್ರಿಕೆಯನ್ನು ಖಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News