‘ಸಾವಿನ ಬಯಕೆ’ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಆದಿತ್ಯನಾಥ್

Update: 2020-02-19 16:38 GMT

ಲಕ್ನೋ,ಫೆ.19: ರಾಜ್ಯದಲ್ಲಿ ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಸಾವುಗಳ ಕುರಿತು ಬುಧವಾರ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯು ಭಾರೀ ವಿವಾದವನ್ನು ಸೃಷ್ಟಿಸಿತು.

ಡಿಸೆಂಬರ್ ಹಿಂಸಾಚಾರಗಳಲ್ಲಿ ಸುಮಾರು 20 ಸಾವುಗಳ ಕುರಿತು ಮಾತನಾಡುತ್ತಿದ್ದ ಆದಿತ್ಯನಾಥ್,ಯಾರಾದರೂ ಸಾಯುವ ಬಯಕೆಯಿಂದಲೇ ಬಂದಿದ್ದರೆ ಅವರು ಹೇಗೆ ಜೀವಂತವಾಗಿರುತ್ತಾರೆ ಎಂದು ಪ್ರಶ್ನಿಸಿದರು.

ಪೊಲೀಸರ ಗುಂಡುಗಳಿಂದ ಯಾರೊಬ್ಬರೂ ಸತ್ತಿಲ್ಲ. ಸತ್ತವರೆಲ್ಲ ದಂಗೆಕೋರರ ಗುಂಡುಗಳಿಗೆ ಬಲಿಯಾಗಿದ್ದಾರೆ. ಯಾರಾದರೂ ಜನರಿಗೆ ಗುಂಡಿಕ್ಕುವ ಉದ್ದೇಶದಿಂದ ಬೀದಿಗಳಿದರೆ ಒಂದೇ ಆತ ಅಥವಾ ಪೊಲೀಸರು ಸಾಯುತ್ತಾರೆ ಎಂದ ಅವರು, ರಾಜ್ಯಾದ್ಯಂತ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು.

‘‘ಆಝಾದಿ (ಸ್ವಾತಂತ್ರ್ಯ)ಯ ಘೋಷಣೆಗಳನ್ನು ಕೂಗಲಾಗುತ್ತಿದೆ. ಯಾವ ಆಝಾದಿ? ನಾವು ಜಿನ್ನಾರ ಕನಸನ್ನು ನನಸಾಗಿಸಲು ಶ್ರಮಿಸಬೇಕೇ ಅಥವಾ ಗಾಂಧಿಯವರ ಕನಸನ್ನೋ? ಡಿಸೆಂಬರ್ ಹಿಂಸಾಚಾರದ ಬಳಿಕ ಪೊಲೀಸರ ಕೆಲಸಕ್ಕಾಗಿ ಅವರನ್ನು ಶ್ಲಾಘಿಸಬೇಕು. ರಾಜ್ಯದಲ್ಲೆಲ್ಲೂ ದಂಗೆಗಳಾಗಿಲ್ಲ’’ ಎಂದ ಮುಖ್ಯಮಂತ್ರಿ,ತನ್ನ ಸರಕಾರವು ಪ್ರತಿಭಟನಾಕಾರರ ವಿರುದ್ಧವಾಗಿಲ್ಲ,ಆದರೆ ಹಿಂಸಾಚಾರದಲ್ಲಿ ತೊಡಗುವವರ ವಿರುದ್ಧ ಕಠಿಣವಾಗಿ ವರ್ತಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News