×
Ad

ದೇಶದಲ್ಲಿ ಎಪ್ರಿಲ್ 1ರಿಂದ ಯುರೊ-6 ತೈಲ ವ್ಯವಸ್ಥೆ ಜಾರಿ: ಇದರ ವಿಶೇಷತೆಯೇನು ಗೊತ್ತಾ ?

Update: 2020-02-19 21:57 IST

ಹೊಸದಿಲ್ಲಿ, ಫೆ.19: ವಿಶ್ವದ ಅತ್ಯಂತ ಸ್ವಚ್ಛ ಪೆಟ್ರೋಲ್, ಡೀಸೆಲ್ ಆಗಿರುವ ಯುರೊ-6 ದರ್ಜೆಯ ತೈಲಗಳನ್ನು ಎಪ್ರಿಲ್ 1ರಿಂದ ದೇಶದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಸರಬರಾಜು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.

ಇದರೊಂದಿಗೆ ಯುರೊ-6 ದರ್ಜೆಯ ತೈಲಗಳನ್ನು ಬಳಸುವ ವಿಶ್ವದ ಕೆಲವೇ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸೇರ್ಪಡೆಯಾಗಲಿದೆ. ಯುರೊ-6 ದರ್ಜೆಯ ತೈಲಗಳಲ್ಲಿ ಸಲ್ಫರ್‌ನ ಅಂಶ ಅತ್ಯಂತ ಕಡಿಮೆಯಾಗಿದ್ದು, ಪೆಟ್ರೋಲ್, ಡೀಸೆಲ್‌ನ 10 ಲಕ್ಷ ಕಣಗಳಲ್ಲಿ ಕೇವಲ 10 ಕಣಗಳು ಮಾತ್ರ ಸಲ್ಫರ್ ಆಗಿರುತ್ತದೆ. ತೈಲಗಳಲ್ಲಿ ಸಲ್ಫರ್‌ನ ಅಂಶ ಅಧಿಕವಾಗಿದ್ದರೆ ಅದರಿಂದ ವಾಹನ ಹೊರಸೂಸುವ ಹೊಗೆಯ ಪ್ರಮಾಣ ಹೆಚ್ಚಿ ವಾಯುಮಾಲಿನ್ಯ ಹೆಚ್ಚುತ್ತದೆ ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

 2019ರ ವರ್ಷಾಂತ್ಯದ ವೇಳೆಗೆ ದೇಶದ ಬಹುತೇಕ ಎಲ್ಲಾ ರಿಫೈನರಿಗಳು ಬಿಎಸ್-6(ಯುರೊ-6ಕ್ಕೆ ಸಮ) ದರ್ಜೆಯ ತೈಲ ಉತ್ಪಾದನೆಯನ್ನು ಆರಂಭಿಸಿದ್ದು ಇದೀಗ ದೇಶದಲ್ಲಿರುವ ಪ್ರತೀ ಹನಿ ತೈಲವನ್ನು ಹೊಸದರೊಂದಿಗೆ ಬದಲಿಸುವ ಅತ್ಯಂತ ಪ್ರಯಾಸದಾಯಕ ಕಾರ್ಯವನ್ನು ತೈಲ ಕಂಪೆನಿಗಳು ನಡೆಸುತ್ತಿವೆ. ಎಪ್ರಿಲ್ 1ರಿಂದ ಪ್ರತೀ ಪೆಟ್ರೋಲ್ ಬಂಕ್‌ಗಳಲ್ಲೂ ಯುರೊ-6 ದರ್ಜೆಯ ತೈಲ ದೊರಕುವ ಬಗ್ಗೆ ಪೂರ್ಣ ವಿಶ್ವಾಸವಿದೆ. ಸಲ್ಫರ್ ಅಂಶ ಕಡಿಮೆಯಿರುವ ಡೀಸೆಲ್ ಬಳಸುವ ಹಳೆಯ ವಾಹನಗಳಿಂದ ಹೊರಸೂಸಲ್ಪಡುವ ಹೊಗೆಯಲ್ಲಿಯೂ ವಾಯುಮಾಲಿನ್ಯದ ಅಂಶ ಕಡಿಮೆ ಇರುತ್ತದೆ ಎಂದು ಸಿಂಗ್ ಹೇಳಿದ್ದಾರೆ.

ಸರಕಾರಿ ಅಧೀನದ ತೈಲ ಕಂಪೆನಿಗಳು 35,000 ಕೋ. ರೂ. ವೆಚ್ಚ ಮಾಡಿ, ಅತೀ ಕಡಿಮೆ ಸಲ್ಫರ್ ಅಂಶವಿರುವ ತೈಲವನ್ನು ಉತ್ಪಾದಿಸುವ ನಿಟ್ಟಿನಲ್ಲಿ ತಮ್ಮ ಸ್ಥಾವರಗಳನ್ನು ಮೇಲ್ದರ್ಜೆಗೇರಿಸಿವೆ. ಬಿಎಸ್-6 ದರ್ಜೆಯ ತೈಲದಲ್ಲಿ ಕೇವಲ 10 ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಸಲ್ಫರ್ ಅಂಶವಿದ್ದು ಇದು ಸಿಎನ್‌ಜಿ(ಸಂಕುಚಿತ ನೈಸರ್ಗಿಕ ಅನಿಲ)ಗೆ ಸಮವಾಗಿದೆ. ಹೊಸ ತೈಲ ಬಳಸುವ ಪೆಟ್ರೋಲ್ ಕಾರುಗಳಲ್ಲಿ ನೈಟ್ರೋಜನ್ ಆಕ್ಸೈಡ್‌ನ ಅಂಶ 25%, ಡೀಸೆಲ್ ಕಾರುಗಳಲ್ಲಿ 70% ಕಡಿಮೆಯಾಗಲಿದೆ. ದಿಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ 2018ರ ಎಪ್ರಿಲ್ 1ರಿಂದ ಬಿಎಸ್-6 ದರ್ಜೆಯ ತೈಲ ಸರಬರಾಜು ಮಾಡಲಾಗುತ್ತಿದ್ದರೆ 2019ರ ಎಪ್ರಿಲ್ 1ರಿಂದ ರಾಜಸ್ತಾನದ 4 ಮತ್ತು ಉತ್ತರಪ್ರದೇಶದ ಎನ್‌ಸಿಆರ್ ವ್ಯಾಪ್ತಿಯ 8 ನಗರ ಹಾಗೂ ಆಗ್ರಾಕ್ಕೆ, ಹರ್ಯಾಣದ 7 ಜಿಲ್ಲೆಗಳಿಗೆ ಬಿಎಸ್-6 ದರ್ಜೆಯ ತೈಲವನ್ನು ಪೂರೈಸಲಾಗುತ್ತಿದೆ.

 2017ರಲ್ಲಿ ಬಿಎಸ್-4 ದರ್ಜೆಗೆ ಪರಿವರ್ತನೆಯಾದ ಬಳಿಕ 2020ರ ವೇಳೆಗೆ ಬಿಎಸ್-6 ದರ್ಜೆಯ ತೈಲ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿತ್ತು. ಬಿಎಸ್-5 ದರ್ಜೆಗೆ ಪರಿವರ್ತನೆಗೊಳಿಸಲು ತೈಲ ರಿಫೈನರೀಸ್ ಸಂಸ್ಥೆಗಳು ಹಾಗೂ ವಾಹನ ಉತ್ಪಾದನೆ ಸಂಸ್ಥೆಗಳು ಹೆಚ್ಚುವರಿ ಹೂಡಿಕೆ ಮಾಡಬೇಕಿದೆ. ಆದ್ದರಿಂದ ಬಿಎಸ್-5ರ ಬದಲು ನೇರವಾಗಿ ಬಿಎಸ್-6ಕ್ಕೆ ಜಂಪ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

1990ರಲ್ಲಿ ಆರಂಭ

ದೇಶದಲ್ಲಿ ಇಂಧನ(ತೈಲ) ಉನ್ನತೀಕರಣ ಯೋಜನೆಯನ್ನು 1990ರಲ್ಲಿ ಆರಂಭಿಸಲಾಗಿತ್ತು. 1994ರಲ್ಲಿ ಸೀಸದ ಅಂಶ ಕಡಿಮೆ ಇರುವ ತೈಲಗಳನ್ನು ದಿಲ್ಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈಯಲ್ಲಿ ಪರಿಚಯಿಸಲಾಗಿತ್ತು. ಸೀಸ ರಹಿತ ತೈಲವನ್ನು 2000ದ ಫೆಬ್ರವರಿ 1ರಿಂದ ದೇಶದಾದ್ಯಂತ ಕಡ್ಡಾಯಗೊಳಿಸಲಾಗಿದೆ. ಇದೇ ರೀತಿ, 2000ದ ಎಪ್ರಿಲ್‌ನಿಂದ ನೂತನ ವಾಹನಗಳಿಗೆ ಬಿಎಸ್-2000(ಬಿಎಸ್-1 ಅಥವಾ ಯುರೊ-1ಗೆ ಸಮ) ಹೊರಸೂಸುವಿಕೆ ಮಾನದಂಡ ಜಾರಿಗೆ ತರಲಾಯಿತು. ಬಿಎಸ್-2 ಮಾನದಂಡವನ್ನು 2000ರಲ್ಲಿ ದಿಲ್ಲಿಯಲ್ಲಿ ಜಾರಿಗೆ ತಂದು 2001ರಲ್ಲಿ ಇತರ ಮೆಟ್ರೋ ನಗರಗಳಿಗೂ ವಿಸ್ತರಿಸಲಾಯಿತು. ಬಿಎಸ್-3 ಮಾನದಂಡವನ್ನು 2010ರಲ್ಲಿ, ಬಿಎಸ್-4 ಮಾನದಂಡವನ್ನು 2017ರಲ್ಲಿ ಜಾರಿಗೆ ತಲಾಯಿತು. ಇದೀಗ ಬಿಎಸ್-4(ಯುರೋ 4)ರಿಂದ ನೇರವಾಗಿ ಬಿಎಸ್-6ಕ್ಕೆ ಜಂಪ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News