ಸಿಬಿಐ ಮಾಜಿ ನಿರ್ದೇಶಕ ಅಸ್ತಾನಾಗೆ ಸುಳ್ಳು ಪತ್ತೆ ಪರೀಕ್ಷೆ ಯಾಕೆ ನಡೆಸಿಲ್ಲ: ಸಿಬಿಐಗೆ ಕೋರ್ಟ್ ಪ್ರಶ್ನೆ

Update: 2020-02-19 17:13 GMT

ಹೊಸದಿಲ್ಲಿ, ಫೆ.19: ಲಂಚ ಪಡೆದಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾರ ಸುಳ್ಳು ಪತ್ತೆ ಪರೀಕ್ಷೆ ಹಾಗೂ ಮನೋವೈಜ್ಞಾನಿಕ ಪರೀಕ್ಷೆ ಯಾಕೆ ನಡೆಸಿಲ್ಲ ಎಂದು ದಿಲ್ಲಿಯ ನ್ಯಾಯಾಲಯ ಸಿಬಿಐಯನ್ನು ಪ್ರಶ್ನಿಸಿದೆ.

ಈ ಪ್ರಕರಣದಲ್ಲಿ ಆರಂಭದಲ್ಲಿ ತನಿಖೆ ನಡೆಸಿದ್ದ ತನಿಖಾಧಿಕಾರಿ ಅಜಯ್ ಕುಮಾರ್ ಬಾಸ್ಸಿ ಫೆಬ್ರವರಿ 28ರಂದು ನ್ಯಾಯಾಲಯದೆದುರು ಹಾಜರಾಗುವಂತೆ ವಿಶೇಷ ಸಿಬಿಐ ನ್ಯಾಯಾಧೀಶ ಸಂಜೀವ್ ಅಗರ್‌ವಾಲ್ ಸೂಚಿಸಿದ್ದಾರೆ. ಲಂಚ ಸ್ವೀಕಾರ ಪ್ರಕರಣದಲ್ಲಿ ಅಸ್ತಾನಾಗೆ ಇತ್ತೀಚೆಗೆ ಕ್ಲೀನ್‌ಚಿಟ್ ನೀಡಲಾಗಿದೆ. ಮಾಂಸ ರಫ್ತು ವ್ಯಾಪಾರಿ ಮೊಯೀನ್ ಖುರೇಶಿ ಒಳಗೊಂಡಿದ್ದ ಪ್ರಕರಣವೊಂದರಲ್ಲಿ ರಾಕೇಶ್ ಅಸ್ತಾನಾ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಹೈದರಾಬಾದ್ ಮೂಲದ ವ್ಯಾಪಾರಿ ಸತೀಶ್ ಸನಾ ಎಂಬವರು 2017ರಲ್ಲಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು.

2018ರಲ್ಲಿ ಅಸ್ತಾನಾ ಹಾಗೂ ಪೊಲೀಸ್ ಉಪ ಅಧೀಕ್ಷಕ ದೇವೇಂದರ್ ಕುಮಾರ್‌ರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ವಿಚಾರಣೆ ನಡೆಸಿದ ಬಳಿಕ ಆರೋಪಕ್ಕೆ ಸೂಕ್ತ ಪುರಾವೆ ಒದಗಿಸಿಲ್ಲ ಎಂಬ ಕಾರಣ ನೀಡಿ ಕ್ಲೀನ್‌ಚಿಟ್ ನೀಡಲಾಗಿದೆ. ಪ್ರಕರಣದ ಬಗ್ಗೆ ಸಿಬಿಐ ನಡೆಸಿದ್ದ ತನಿಖೆ ಕುರಿತು ಕಳೆದ ವಾರ ಅತೃಪ್ತಿ ಸೂಚಿಸಿದ್ದ ನ್ಯಾಯಾಲಯ, ಗುರುತರ ಆರೋಪ ಹೊಂದಿರುವ ಆರೋಪಿಗಳನ್ನು ಮುಕ್ತಗೊಳಿಸಿರುವ ಸಿಬಿಐ ತನ್ನದೇ ಉಪ ಅಧೀಕ್ಷಕರನ್ನು ಬಂಧಿಸಿರುವ ಬಗ್ಗೆ ಪ್ರಶ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News