‘ನಿಮ್ಮ ಪೌರತ್ವ ಸಾಬೀತುಪಡಿಸಿ’: ‌100 ಹೈದರಾಬಾದ್ ನಿವಾಸಿಗಳಿಗೆ ಯುಐಡಿಎಐ ನೋಟಿಸ್

Update: 2020-02-19 17:19 GMT

ಹೈದರಾಬಾದ್, ಫೆ. 19: ಕಾನೂನು ಬಾಹಿರವಾಗಿ ಆಧಾರ್ ಕಾರ್ಡ್ ಪಡೆದುಕೊಂಡಿರುವುದಾಗಿ ಆರೋಪಿಸಿರುವ ಭಾರತದ ಅನನ್ಯ ಗುರುತು ಪ್ರಾಧಿಕಾರ (ಯುಐಡಿಎಐ) ಪೌರತ್ವ ಸಾಬೀತುಪಡಿಸುವಂತೆ ಆಗ್ರಹಿಸಿ ನಗರದ 120 ಜನರಿಗೆ ನೋಟಿಸು ಜಾರಿ ಮಾಡಿದೆ.

ಪೊಲೀಸರಿಂದ ವರದಿ ಪಡೆದ ಬಳಿಕ ಈ ನೋಟಿಸು ಜಾರಿ ಮಾಡಲಾಗಿದೆ ಎಂದು ಯುಐಡಿಎಐ ಹೇಳಿದೆ. ‘‘ಆಧಾರ್ ಪೌರತ್ವಕ್ಕೆ ದಾಖಲೆಯಲ್ಲ. ಆಧಾರ್‌ಗೆ ಅರ್ಜಿ ಸಲ್ಲಿಸುವ ಮುನ್ನ 182 ದಿನಗಳ ಕಾಲ ಭಾರತದಲ್ಲಿ ವಾಸಿಸಿರಬೇಕು ಎಂದು ಖಚಿತಪಡಿಸಿಕೊಳ್ಳುವುದು ಆಧಾರ್ ಕಾಯ್ದೆ ಅಡಿಯಲ್ಲಿ ಯುಐಡಿಎಐ ಕಡ್ಡಾಯಗೊಳಿಸಿದೆ’’ ಎಂದು ಯುಐಡಿಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ನೀಡಬೇಡಿ ಎಂದು ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ ಹೇಳಿದೆ ಎಂದು ಅದು ತಿಳಿಸಿದೆ. ನೊಟೀಸ್ ಸ್ವೀಕರಿಸಿದವರು ಇದನ್ನು ಪ್ರಶ್ನಿಸಿ ಹೈಕೋರ್ಟ್‌ನ ಮೆಟ್ಟಿಲೇರಲು ಚಿಂತಿಸುತ್ತಿದ್ದಾರೆ. ಒಂದು ನೋಟಿಸ್ ಅನ್ನು ಇಲ್ಲಿನ ಹಳೆ ನಗರ ಪ್ರದೇಶದ ತಲಬಾ ಕಟ್ಟಾದ ನಿವಾಸಿ ಮುಹಮ್ಮದ್ ಸತ್ತಾರ್‌ಗೆ ರವಾನಿಸಲಾಗಿದೆ. ನೋಟಿಸ್‌ನಲ್ಲಿ ಮುಹಮ್ಮದ್ ಸತ್ತಾರ್ ಅವರು ಸುಳ್ಳು ಮಾಹಿತಿ ನೀಡಿ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ ಹಾಗೂ ಅವರು ಭಾರತದ ಪ್ರಜೆ ಅಲ್ಲ ಎಂದು ಹೇಳಲಾಗಿದೆ.

 ‘‘ನಿಮ್ಮ ಪೌರತ್ವ ಸಾಬೀತುಪಡಿಸಿ. ನೀವು ಭಾರತೀಯ ಪ್ರಜೆ ಅಲ್ಲದೇ ಇದ್ದರೆ, ಭಾರತದ ಗಡಿಯನ್ನು ಕಾನೂನಾತ್ಮಕವಾಗಿ ಪ್ರವೇಶಿಸಿರುವುದನ್ನು ಹಾಗೂ ಕಾನೂನುಬದ್ಧವಾಗಿ ವಾಸಿಸುತ್ತಿರುವುದನ್ನು ಸಾಬೀತುಪಡಿಸಿ’’ ಎಂದು ಯುಐಡಿಎಐ ಸತ್ತಾರ್‌ಗೆ ನಿರ್ದೇಶಿಸಿದೆ. ಹಾಜರಾಗದೇ ಇದ್ದರೆ ಹಾಗೂ ಅಗತ್ಯ ಇರುವ ದಾಖಲೆಗಳನ್ನು ಸಲ್ಲಿಸದೇ ಇದ್ದರೇ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ನಿರ್ಧರಿಸಲಾಗುವುದು ಎಂದು ಯುಐಡಿಎಐ ಸತ್ತಾರ್ ಅವರಿಗೆ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News