ಟ್ರಂಪ್‌ಗೆ ಅದ್ದೂರಿ ಸ್ವಾಗತ ಕೋರಲು ಅವರೇನು ದೇವರೇ: ಕಾಂಗ್ರೆಸ್ ಪ್ರಶ್ನೆ

Update: 2020-02-19 18:16 GMT

ಹೊಸದಿಲ್ಲಿ, ಫೆ.19: “ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸ್ವಾಗತಿಸಲು 70 ಲಕ್ಷ ಜನರನ್ನು ಸೇರಿಸುವ ಅಗತ್ಯವಿದೆಯೇ. ಅವರೇನು ದೇವರೇ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಟ್ರಂಪ್ ತಮ್ಮ ಸ್ವಹಿತಾಸಕ್ತಿಯ ಕಾರಣದಿಂದ ಭಾರತಕ್ಕೆ ಆಗಮಿಸುತ್ತಿದ್ದಾರೆ. ಅವರು ಇಲ್ಲಿ ಯಾವುದೇ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ. ಅಮೆರಿಕದ ಅನುಕೂಲಕ್ಕಾಗಿ ಅವರು ಬರುತ್ತಿದ್ದಾರೆ, ನಮ್ಮನ್ನು ಸಂತುಷ್ಟಗೊಳಿಸಲು ಅಲ್ಲ. ಅವರನ್ನು ಸ್ವಾಗತಿಸಲು 70 ಲಕ್ಷ ಜನ ಸೇರಿಸಲು ಅವರೇನು ದೇವರೇ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ಪ್ರಶ್ನಿಸಿದ್ದಾರೆ.

 26/11ರ ದಾಳಿಯ ಬಳಿಕ ಕಾಂಗ್ರೆಸ್ ಪಕ್ಷ ಹಿಂದು ಭಯೋತ್ಪಾದನೆ ಎಂಬ ಸುಳ್ಳು ಸೃಷ್ಟಿಯ ಮೂಲಕ ಭೀತಿ ಹರಡಲು ಪ್ರಯತ್ನಿಸಿತ್ತು ಎಂಬ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಚೌಧುರಿ, ಹಿಂದು ಭಯೋತ್ಪಾದನೆ ಪದ ಹುಟ್ಟಿಕೊಂಡ ಸಂದರ್ಭದಲ್ಲಿ ಭಿನ್ನ ಪರಿಸ್ಥಿತಿಯಿತ್ತು. ಹೈದರಾಬಾದ್‌ನ ಮಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟವಾಗಿತ್ತು ಮತ್ತು ಪ್ರಜ್ಞಾ ಠಾಕೂರ್ ಹಾಗೂ ಇತರರ ಬಂಧನವಾಗಿತ್ತು. ಭಯೋತ್ಪಾದಕರು ಯಾವಾಗಲೂ ರೂಪ ಮರೆಸಿಕೊಂಡಿರುತ್ತಾರೆ. ನಿಜವಾದ ಗುರುತಿನೊಂದಿಗೆ ಅವರೆಂದೂ ದಾಳಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಮುಂಬೈ ದಾಳಿಯ ಕುರಿತ ಎಲ್ಲಾ ವಿವರನ್ನು ಆಗಿನ ಯುಪಿಎ ಸರಕಾರ ಬಹಿರಂಗಗೊಳಿಸಿದೆ. ಅಲ್ಲದೆ ಯುಪಿಎ ಸರಕಾರದ ಅವಧಿಯಲ್ಲೇ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಲಾಗಿದೆ ಎಂದು ಚೌಧುರಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News