ವೆಲ್ಲಿಂಗ್ಟನ್‌ನ ‌ನಲ್ಲಿ 52 ವರ್ಷಗಳ ಹಳೆಯ ದಾಖಲೆ ಸರಿಗಟ್ಟುವತ್ತ ಕೊಹ್ಲಿ ಚಿತ್ತ

Update: 2020-02-19 18:40 GMT

ವೆಲ್ಲಿಂಗ್ಟನ್, ಫೆ.19: ಏಕದಿನ ಸರಣಿಯಲ್ಲಿ ನ್ಯೂಝಿಲ್ಯಾಂಡ್ ಕೈಯಲ್ಲಿ ಸೋಲನುಭವಿಸಿದ್ದ ಭಾರತ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋಲಿನ ನೋವು ಮರೆಯುವ ವಿಶ್ವಾಸದಲ್ಲಿದೆ.

ವೆಲ್ಲಿಂಗ್ಟನ್‌ನ ಬಾಸಿನ್ ರಿಸರ್ವ್‌ನಲ್ಲಿ ಶುಕ್ರವಾರದಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗುವುದು. ಈ ಮೈದಾನದಲ್ಲಿ ಭಾರತದ ದಾಖಲೆ ಉತ್ತಮವಾಗಿಲ್ಲ.

ಭಾರತ ತಂಡ ನ್ಯೂಝಿಲ್ಯಾಂಡ್‌ನಲ್ಲಿ ಒಟ್ಟು 23 ಟೆಸ್ಟ್ ಪಂದ್ಯಗಳಲ್ಲಿ ಆಡಿದೆ. ಕೇವಲ ಐದು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಭಾರತ 8 ಪಂದ್ಯಗಳಲ್ಲಿ ಸೋಲನುಭವಿಸಿದ್ದು, 10 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ. ವೆಲ್ಲಿಂಗ್ಟನ್‌ನಲ್ಲಿ ಭಾರತದ ದಾಖಲೆ ಕಳಪೆಯಾಗಿದೆ. ಇಲ್ಲಿ ಆಡಿರುವ 7 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ದಾಖಲಿಸಿದೆ.

ಭಾರತ 1968ರಲ್ಲಿ ಮಾತ್ರ ವೆಲ್ಲಿಂಗ್ಟನ್‌ನಲ್ಲಿ ಗೆಲುವಿನ ನಗೆ ಬೀರಿತ್ತು. ಅದು ಈ ಮೈದಾನದಲ್ಲಿ ನಡೆದ ಮೊದಲ ಪಂದ್ಯವಾಗಿತ್ತು. ಆ ಬಳಿಕ ಭಾರತ ಇಲ್ಲಿ 4 ಪಂದ್ಯಗಳಲ್ಲಿ ಸೋತಿದ್ದು, ಎರಡರಲ್ಲಿ ಡ್ರಾ ಸಾಧಿಸಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರೆ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ನೇತೃತ್ವದ ಭಾರತ ತಂಡ 52 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆ ಸರಿಗಟ್ಟಬಹುದು. ಪಟೌಡಿ ನಾಯಕತ್ವದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್‌ನ್ನು ವೆಲ್ಲಿಂಗ್ಟನ್‌ನಲ್ಲಿ ಮಣಿಸಿತ್ತು. ಕಳೆದ 60 ವರ್ಷಗಳಿಂದ ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಳ್ಳುತ್ತಿರುವ ಭಾರತ ತಂಡ 1968ರಲ್ಲಿನ ತನ್ನ ಮೊದಲ ಪ್ರವಾಸದಲ್ಲಿ 4 ಟೆಸ್ಟ್ ಪಂದ್ಯಗಳ ಪೈಕಿ 3ರಲ್ಲಿ ಜಯ ಸಾಧಿಸಿ ಯಶಸ್ವಿ ಪ್ರದರ್ಶನ ನೀಡಿತ್ತು. 3-1 ಅಂತರದಿಂದ ಸರಣಿ ಗೆದ್ದುಕೊಂಡಿತ್ತು. ಆ ಬಳಿಕ ಭಾರತ ತಂಡ ನ್ಯೂಝಿಲ್ಯಾಂಡ್‌ನಲ್ಲಿ ಕೇವಲ 2 ಟೆಸ್ಟ್ ಪಂದ್ಯಗಳನ್ನು ಮಾತ್ರ ಜಯಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News