ಅದಾನಿ ಸಂಸ್ಥೆಗೆ ವಿಮಾನನಿಲ್ದಾಣ ಲೀಸ್ ನೀಡಿಕೆ ವಿರೋಧಿಸಿ ಸುಪ್ರೀಂಗೆ ಅರ್ಜಿ : ಕೇರಳ ಸರಕಾರ

Update: 2020-02-20 14:57 GMT

ತಿರುವನಂತಪುರ, ಫೆ.20: ತ್ರಿವೇಂಡ್ರಮ್(ತಿರುವನಂತಪುರ) ವಿಮಾನ ನಿಲ್ದಾಣವನ್ನು 50 ವರ್ಷಗಳ ಅವಧಿಗೆ ಅದಾನಿ ಸಂಸ್ಥೆಗೆ ಲೀಸ್ ನೀಡುವುದನ್ನು ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಕೇರಳ ಸರಕಾರ ನಿರ್ಧರಿಸಿದೆ.

ವಿಮಾನ ನಿಲ್ದಾಣವನ್ನು ಲೀಸ್ ನೀಡಲು ಕಳೆದ ಫೆಬ್ರವರಿಯಲ್ಲಿ ನಡೆಸಿದ್ದ ಬಿಡ್‌ನಲ್ಲಿ ಕಡೆಯ ಕ್ಷಣದವರೆಗೂ ಸ್ಪರ್ಧೆಯಲ್ಲಿದ್ದ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ(ಕೆಎಸ್‌ಐಡಿಸಿ)ಕ್ಕಿಂತ ಅಧಿಕ ಬಿಡ್ ಮೊತ್ತವನ್ನು ಅದಾನಿ ಸಂಸ್ಥೆ ಉಲ್ಲೇಖಿಸಿದ್ದ ಕಾರಣ ಕೆಎಸ್‌ಐಡಿಸಿಗೆ ನಿರಾಶೆಯಾಗಿತ್ತು. ಅದಾನಿ ಸಂಸ್ಥೆ ಉಲ್ಲೇಖಿಸಿದ್ದ ಮೊತ್ತವನ್ನೇ ಪಾವತಿಸುತ್ತೇವೆ. ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಅನುಭವ ಇರುವ ಕೆಎಸ್‌ಐಡಿಸಿಗೆ ಆದ್ಯತೆ ನೀಡಿ ತ್ರಿವೇಂಡ್ರಮ್ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಡಬೇಕು ಎಂದು ಕೇರಳ ಸರಕಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು.

ವಿಮಾನ ನಿಲ್ದಾಣದ ನಿರ್ವಹಣೆಯಲ್ಲಿ ಖಾಸಗಿಯವರನ್ನು ಸೇರಿಸಿಕೊಳ್ಳುವ ಮುನ್ನ ರಾಜ್ಯ ಸರಕಾರದೊಡನೆ ಸಮಾಲೋಚಿಸಬೇಕು ಎಂದು 2003ರ ಕರಾರುಪತ್ರದಲ್ಲಿ ಸೂಚಿಸಲಾಗಿದೆ. ಅಲ್ಲದೆ ತ್ರಿವೇಂಡ್ರಮ್ ವಿಮಾನ ನಿಲ್ದಾಣ ಇರುವ ಜಮೀನು ಕೇರಳ ಸರಕಾರದ ಸ್ವಾಧೀನದಲ್ಲಿದ್ದು ಈ ಜಮೀನನ್ನು ರಾಜ್ಯ ಸರಕಾರವು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಉಚಿತವಾಗಿ ಒದಗಿಸಿದೆ ಎಂದು ಕೇರಳ ಸರಕಾರ ಅರ್ಜಿಯಲ್ಲಿ ತಿಳಿಸಿದೆ. ಮೊದಲು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ವ್ಯಾಜ್ಯವನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಬೇಕು ಎಂದು ಸೂಚಿಸಿ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News