ಅರುಣಾಚಲಕ್ಕೆ ಅಮಿತ್ ಶಾ ಭೇಟಿಗೆ ಚೀನಾ ವಿರೋಧ: ವಿವೇಚನಾರಹಿತ ಹೇಳಿಕೆ ಎಂದು ತಿರುಗೇಟು ನೀಡಿದ ಭಾರತ

Update: 2020-02-20 15:18 GMT

ಹೊಸದಿಲ್ಲಿ, ಫೆ.20: ಗುರುವಾರ ರಾಜ್ಯ ಸ್ಥಾಪನಾ ದಿನ ಸಮಾರಂಭಕ್ಕಾಗಿ ಗೃಹಸಚಿವ ಅಮಿತ್ ಶಾ ಅವರ ಅರುಣಾಚಲ ಪ್ರದೇಶ ಭೇಟಿಯನ್ನು ತೀವ್ರವಾಗಿ ವಿರೋಧಿಸಿರುವ ಚೀನಾ,ಇದು ಪ್ರಾದೇಶಿಕ ಸಾರ್ವಭೌಮತೆಯನ್ನು ಉಲ್ಲಂಘಿಸಿದೆ ಮತ್ತು ರಾಜಕೀಯ ಪರಸ್ಪರ ನಂಬಿಕೆಯನ್ನು ಹಾಳುಗೆಡವಿದೆ ಎಂದು ಹೇಳಿದೆ. ಚೀನಾದ್ದು ವಿವೇಚನಾರಹಿತ ಹೇಳಿಕೆ ಎಂದು ಭಾರತವು ತಿರುಗೇಟು ನೀಡಿದೆ.

ಅರುಣಾಚಲ ಪ್ರದೇಶವು ತನಗೆ ಸೇರಿದೆ ಎಂದು ವಾದಿಸುತ್ತಿರುವ ಚೀನಾ ಅದನ್ನು ದಕ್ಷಿಣ ಟಿಬೆಟ್ ಎಂದೇ ಕರೆಯುತ್ತಿದೆ. ಅರುಣಾಚಲ ಪ್ರದೇಶಕ್ಕೆ ಭಾರತೀಯ ರಾಜಕಾರಣಿಗಳ ಭೇಟಿಯನ್ನು ಅದು ಪದೇ ಪದೇ ವಿರೋಧಿಸುತ್ತಲೇ ಬಂದಿದೆ.

ಚೀನಾ-ಭಾರತ ಗಡಿಯ ಪೂರ್ವದ ಕ್ಷೇತ್ರ ಅಥವಾ ಚೀನಾದ ಟಬೆಟ್ ಪ್ರದೇಶದ ದಕ್ಷಿಣ ಭಾಗದ ಬಗ್ಗೆ ದೇಶದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ ಎಂದು ಹೇಳಿರುವ ಚೀನಾದ ವಿದೇಶಾಂಗ ಸಚಿವ ಗೆಂಗ್ ಶುಆಂಗ್ ಅವರು,ತಥಾಕಥಿತ ಅರುಣಾಚಲ ಪ್ರದೇಶಕ್ಕೆ ಚೀನಾ ಸರಕಾರವು ಎಂದಿಗೂ ಮಾನ್ಯತೆ ನೀಡಿಲ್ಲ ಮತ್ತು ಅಲ್ಲಿಗೆ ಭಾರತೀಯ ರಾಜಕಾರಣಿಗಳ ಭೇಟಿಯನ್ನು ದೃಢವಾಗಿ ವಿರೋಧಿಸುತ್ತದೆ ಎಂದಿದ್ದಾರೆ. ಗಡಿ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುವ ಯಾವುದೇ ಕ್ರಮಗಳನ್ನು ಕೈಗೊಳ್ಳುವುದರಿಂದ ದೂರವಿರುವಂತೆ ಭಾರತಕ್ಕೆ ಆಗ್ರಹಿಸಿರುವ ಅವರು,ಗಡಿಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಚೀನಾದ ನಿಲುವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿರಸ್ಕರಿಸಿದೆ.

ಅರುಣಾಚಲ ಪ್ರದೇಶವು ಭಾರತದ ಅಖಂಡ ಭಾಗವಾಗಿದೆ. ಭಾರತೀಯ ನಾಯಕರು ದೇಶದ ಇತರ ರಾಜ್ಯಗಳಿಗೆ ಭೇಟಿ ನೀಡುವಂತೆ ಅರುಣಾಚಲ ಪ್ರದೇಶಕ್ಕೂ ಮಾಮೂಲಾಗಿ ಭೇಟಿ ನೀಡುತ್ತಿರುತ್ತಾರೆ. ಭಾರತೀಯ ನಾಯಕರೋರ್ವರು ದೇಶದ ಯಾವುದೇ ರಾಜ್ಯಕ್ಕೆ ಭೇಟಿ ನೀಡುವುದನ್ನು ಆಕ್ಷೇಪಿಸುವುದು ವಿವೇಚನಾರಹಿತವಾಗಿದೆ ಎಂದು ಸಚಿವಾಲಯದ ವಕ್ತಾರ ರವೀಶ ಕುಮಾರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತನ್ಮಧ್ಯೆ ಗುರುವಾರ ಅರುಣಾಚಲ ಪ್ರದೇಶದ 34ನೇ ಸ್ಥಾಪನಾ ದಿನದ ಸಮಾರಂಭದಲ್ಲಿ ಮಾತನಾಡಿದ ಶಾ,ಈ ಪ್ರದೇಶದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಳ್ಳುವ ಯಾವುದೇ ಯೋಜನೆ ಕೇಂದ್ರದ ಮುಂದಿಲ್ಲ ಎಂದು ಈಶಾನ್ಯ ರಾಜ್ಯಗಳ ಜನರಿಗೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News