ಕರ್ನಾಟಕ-ಜಮ್ಮು ಪಂದ್ಯಕ್ಕೆ ಮಂದ ಬೆಳಕು ಅಡ್ಡಿ

Update: 2020-02-20 16:59 GMT

ಜಮ್ಮು, ಫೆ.20: ಜಮ್ಮು-ಕಾಶ್ಮೀರ ವಿರುದ್ಧ ಗುರುವಾರ ಆರಂಭವಾದ ರಣಜಿ ಟ್ರೋಫಿಯ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನ ಮಂದ ಬೆಳಕು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕೇವಲ ಆರು ಓವರ್‌ಗಳ ಪಂದ್ಯ ಆಡಲು ಸಾಧ್ಯವಾಗಿದ್ದು,ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ 16 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆಕಾಶದಲ್ಲಿ ಮೋಡ ಕವಿದಿದ್ದ ಕಾರಣ ಇಡೀ ದಿನ ಪಂದ್ಯಕ್ಕೆ ಮಂದ ಬೆಳಕು ಅಡ್ಡಿಯಾಯಿತು. ಪಂದ್ಯವು ಟೀ ವಿರಾಮದ ಬಳಿಕ ಆರಂಭವಾಯಿತು. ಕೇವಲ ಆರು ಓವರ್‌ಗಳ ಪಂದ್ಯ ಆಡಲು ಸಾಧ್ಯವಾಗಿದೆ. ಜಮ್ಮು ಹಾಗೂ ಕಾಶ್ಮೀರದ ಹೊಸ ಚೆಂಡಿನ ಬೌಲರ್ ಗಳಾದ ಅಖೀಬ್ ನಬಿ(1-6) ಹಾಗೂ ಮುಜ್ತಾಬಾ ಯೂಸುಫ್(1-5) ವಿರುದ್ಧ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಟ ನಡೆಸಿದರು. ಎರಡನೇ ಪ್ರಥಮ ದರ್ಜೆ ಪಂದ್ಯವನ್ನಾಡಿದ ಎಡಗೈ ವೇಗದ ಬೌಲರ್ ಯೂಸುಫ್ ಇಂದು ಮೊದಲ ವಿಕೆಟ್ ಪಡೆದರು. ಕರ್ನಾಟಕದ ಇಬ್ಬರು ಆರಂಭಿಕ ಆಟಗಾರರಾದ ರವಿ ಕುಮಾರ ಸಮರ್ಥ್(5)ಹಾಗೂ ದೇವದತ್ತ ಪಡಿಕ್ಕಲ್(2) ವಿಕೆಟನ್ನು ಬೇಗನೆ ಕಳೆದುಕೊಂಡಿದೆ. ದಿನದಾಟದಂತ್ಯಕ್ಕೆ ನಾಯಕ ಕರುಣ್ ನಾಯರ್ ಔಟಾಗದೆ 4 ರನ್ ಗಳಿಸಿದ್ದು, ಕೃಷ್ಣಮೂರ್ತಿ ಸಿದ್ದಾರ್ಥ್ ಇನ್ನಷ್ಟೇ ರನ್ ಖಾತೆ ತೆರೆಯಬೇಕಾಗಿದೆ. ಮೊದಲ ಬಾರಿ ರಣಜಿ ಟ್ರೋಫಿ ಸೆಮಿ ಫೈನಲ್ ಪ್ರವೇಶಿಸುವತ್ತ ಕಣ್ಣು ನೆಟ್ಟಿರುವ ಜಮ್ಮು-ಕಾಶ್ಮೀರ ಉಳಿದ ನಾಲ್ಕು ದಿನಗಳಲ್ಲಿ ಪಂದ್ಯ ಸರಾಗವಾಗಿ ನಡೆಯುವ ವಿಶ್ವಾಸದಲ್ಲಿದೆ.

 ಪಾರ್ಥಿವ್ ಪಟೇಲ್ ಶತಕ, ಗುಜರಾತ್ 330/4

 ವಲ್ಸಾಡ್, ಫೆ.20: ನಾಯಕ ಪಾರ್ಥಿವ್ ಪಟೇಲ್‌ರ ಆಕರ್ಷಕ ಶತಕದ(ಔಟಾಗದೆ 118)ಸಹಾಯದಿಂದ ಆತಿಥೇಯ ಗುಜರಾತ್ ತಂಡ ಗೋವಾ ವಿರುದ್ಧ ರಣಜಿ ಟ್ರೋಫಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದಿದೆ. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಗುಜರಾತ್ ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 330 ರನ್ ಗಳಿಸಿತು. ಪಟೇಲ್ ಗೋವಾ ವಿರುದ್ಧ ಪಂದ್ಯಕ್ಕಿಂತ ಮೊದಲು ಕಳೆದ ಮೂರು ಪಂದ್ಯಗಳಲ್ಲಿ 58, ಔಟಾಗದೆ 41 ಹಾಗೂ 57 ರನ್ ಗಳಿಸಿದ್ದರು. ಸಮಿತ್ ಗೊಹೆಲ್(52) ಹಾಗೂ ಪ್ರಿಯಾಂಕ್ ಪಾಂಚಾಲ್(28) ಮೊದಲ ವಿಕೆಟ್ ಜೊತೆಯಾಟದಲ್ಲಿ 64 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು. ಅರ್ಧಶತಕದ ಕೊಡುಗೆ ನೀಡಿದ ಭಾರ್ಗವ್ ಮಿರೈ(84, 113 ಎಸೆತ, 12 ಬೌಂಡರಿ)ನಾಯಕ ಪಟೇಲ್‌ರೊಂದಿಗೆ 3ನೇ ವಿಕೆಟ್‌ಗೆ 139 ರನ್ ಸೇರಿಸಿ ಉತ್ತಮ ಸಾಥ್ ನೀಡಿದರು. 27ನೇ ಶತಕ ಸಿಡಿಸಿದ ಪಟೇಲ್(ಔಟಾಗದೆ 118, 156 ಎಸೆತ, 15 ಬೌಂಡರಿ)ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದರು. ಚಿರಾಗ್ ಗಾಂಧಿ(ಔಟಾಗದೆ 40) ಅವರೊಂದಿಗೆ 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 82 ರನ್ ಸೇರಿಸಿ ದ ಪಾರ್ಥಿವ ಪಟೇಲ್ ಗುಜರಾತ್ 4 ವಿಕೆಟ್ ನಷ್ಟಕ್ಕೆ 330 ರನ್ ಗಳಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News