ಬಿಜೆಪಿ ಸರಕಾರ ನಕಲಿ ಎಂದು ರದ್ದುಗೊಳಿಸಿದ್ದ ಶೇ. 90ರಷ್ಟು ಪಡಿತರ ಚೀಟಿಗಳು ಅಸಲಿ: ಅಧ್ಯಯನ ವರದಿ

Update: 2020-02-20 17:00 GMT
ಸಾಂದರ್ಭಿಕ ಚಿತ್ರ ಫೋಟೊ ಕೃಪೆ: moneycontrol

ಹೊಸದಿಲ್ಲಿ, ಫೆ.20: ಜಾರ್ಖಂಡ್ ಸರಕಾರವು 2016-18ರ ಅವಧಿಯಲ್ಲಿ ಅಸಿಂಧು ಎಂದು ಘೋಷಿಸಿರುವ ಪಡಿತರ ಚೀಟಿಗಳ ಪೈಕಿ ಸುಮಾರು ಶೇ.90ರಷ್ಟು ಅಸಲಿಯಾಗಿವೆ ಎಂದು ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆ್ಯಕ್ಷನ್ ಲ್ಯಾಬ್ ಗುರುವಾರ ಬಿಡುಗಡೆಗೊಳಿಸಿರುವ ವರದಿಯು ಬಹಿರಂಗಗೊಳಿಸಿದೆ. ರದ್ದುಗೊಂಡಿರುವ ಈ ಪಡಿತರ ಚೀಟಿಗಳ ಪೈಕಿ ಶೇ.56ರಷ್ಟು ಆಧಾರ್ ಸಂಖ್ಯೆಯೊಂದಿಗೆ ಜೋಡಣೆಗೊಂಡಿರಲಿಲ್ಲ.

ಜಾರ್ಖಂಡ್‌ನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹಸಿವೆಯಿಂದ ಮತ್ತು ಪಡಿತರ ಆಹಾರ ಧಾನ್ಯಗಳ ಅಲಭ್ಯತೆಯಿಂದ 23 ಸಾವುಗಳು ಸಂಭವಿಸಿವೆ.

2017ರಲ್ಲಿ ಆಗಿನ ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಲಕ್ಷಾಂತರ ಪಡಿತರ ಚೀಟಿಗಳನ್ನು ಅಸಿಂಧು ಎಂದು ಘೋಷಿಸಿತ್ತು. ಇವುಗಳಲ್ಲಿ ಹೆಚ್ಚಿನವು ನಕಲಿಯಾಗಿವೆ ಎಂದು ಅದು ಹೇಳಿತ್ತು. ಪಡಿತರ ಚೀಟಿಗಳನ್ನು ಆಧಾರ್‌ನೊಂದಿಗೆ ಜೋಡಣೆಗೊಳಿಸಲು 2017, ಎ.5ರ ಗಡುವು ವಿಧಿಸಿದ್ದ ರಾಜ್ಯ ಸರಕಾರವು,ವಿಫಲಗೊಂಡವರ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದಾಗಿ ತಿಳಿಸಿತ್ತು. 11 ಲ.ಪಡಿತರ ಚೀಟಿಗಳನ್ನು ರದ್ದುಗೊಳಿಸಿರುವುದಾಗಿ ಮೊದಲು ತಿಳಿಸಿದ್ದ ಸರಕಾರವು ನಂತರ ಈ ಸಂಖ್ಯೆಯನ್ನು 6.96 ಲ.ಕ್ಕೆ ಪರಿಷ್ಕರಿಸಿತ್ತು.

ಆರ್ಥಿಕ ತಜ್ಞರಾದ ಕಾರ್ತಿಕ ಮುರಳೀಧರನ್,ಪಾಲ್ ನೀಹಾಸ್ ಮತ್ತು ಸಂದೀಪ ಸುಖ್ಟಣಕರ್ ಅವರು ಸಿದ್ಧಪಡಿಸಿರುವ ಅಧ್ಯಯನ ವರದಿಯು ಯಾದ್ರಚ್ಛಿಕವಾಗಿ ಆಯ್ದುಕೊಂಡಿದ್ದ 10 ಜಿಲ್ಲೆಗಳಲ್ಲಿನ 2016-18ರ ಅವಧಿಯಲ್ಲಿನ ಪಡಿತರ ಚೀಟಿಗಳ ರದ್ದತಿ ಪ್ರಕ್ರಿಯೆಯನ್ನು ವಿಶ್ಲೇಷಣೆಗೊಳಪಡಿಸಿತ್ತು. ಈ ಜಿಲ್ಲೆಗಳಲ್ಲಿ ಒಟ್ಟು 1.44 ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿತ್ತು.

ಈ ಪೈಕಿ ಸುಮಾರು ಶೇ.10ರಷ್ಟು ಪಡಿತರ ಚೀಟಿಗಳ ಫಲಾನುಭವಿಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗಿರಲಿಲ್ಲ. ಇಂತಹ ಮನೆಗಳು ಸಂಖ್ಯೆ ಒಟ್ಟು ಫಲಾನುಭವಿಗಳ ಶೇ.3ರಷ್ಟಿತ್ತು ಎಂದು ವರದಿಯು ಹೇಳಿದೆ.

ರಾಜ್ಯ ಸರಕಾರವು ರದ್ದುಗೊಂಡಿರುವ ಪಡಿತರ ಚೀಟಿಗಳ ಪಟ್ಟಿಯನ್ನೆಂದೂ ಬಿಡುಗಡೆಗೊಳಿಸಿಲ್ಲ.

ಜಾರ್ಖಂಡ್‌ನಲ್ಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಬಳಸಲಾದ ಮಾನದಂಡಗಳು ಅಸ್ಪಷ್ಟವಾಗಿವೆ ಎಂದಿರುವ ವರದಿಯು,ಈ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಕೊರತೆಯು ಇಡೀ ಕಾರ್ಯಾಚರಣೆಯನ್ನು ಇನ್ನಷ್ಟು ಆಕ್ಷೇಪಾರ್ಹವಾಗಿಸಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News