ನಾಳೆಯಿಂದ ಮೊದಲ ಟೆಸ್ಟ್: ಭಾರತಕ್ಕೆ ಕಿವೀಸ್ ಸವಾಲು

Update: 2020-02-20 17:09 GMT

ವೆಲ್ಲಿಂಗ್ಟನ್, ಫೆ.20: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾದ ಬಳಿಕ ಮೊದಲ ಬಾರಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸುತ್ತಿರುವ ಭಾರತ ಕಠಿಣ ಸವಾಲು ಎದುರಿಸುವ ಸಾಧ್ಯತೆಯಿದೆ. ಶುಕ್ರವಾರ ಇಲ್ಲಿ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ವಿರಾಟ್ ಕೊಹ್ಲಿ ಪಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿನ ಗೆಲುವಿನ ದಾಖಲೆ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 360 ಅಂಕ ಗಳಿಸಿರುವ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮೇಲ್ನೋಟಕ್ಕೆ ಭಾರತ ಬಲಿಷ್ಠವಾಗಿದ್ದರೂ ನ್ಯೂಝಿಲ್ಯಾಂಡ್‌ನ ಬಲಿಷ್ಠ ವೇಗದ ಬೌಲಿಂಗ್ ವಿಭಾಗ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಬಲ್ಲದು. ಹಿರಿಯ ವೇಗದ ಬೌಲರ್ ನೀಲ್ ವಾಗ್ನರ್ ಸೇವೆಯಿಂದ ಕಿವೀಸ್ ವಂಚಿತವಾಗಿದ್ದರೂ ಟ್ರೆಂಟ್ ಬೌಲ್ಟ್ ವಾಪಸಾಗಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಕಾಲು ನೋವಿನಿಂದಾಗಿ ಪಂದ್ಯಕ್ಕೆ ಲಭ್ಯವಿರದಿದ್ದರೂ, ಭಾರತ ಬಲಿಷ್ಠ ತಂಡವನ್ನು ಕಣಕ್ಕಿಳಿಸಲಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಮಾಯಾಂಕ್ ಅಗರ್ವಾಲ್‌ರೊಂದಿಗೆ ಪೃಥ್ವಿ ಶಾ ಟೆಸ್ಟ್ ಕ್ರಿಕೆಟ್‌ಗೆ ವಾಪಸಾಗುವ ನಿರೀಕ್ಷೆಯಿದೆ. 2018ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯವನ್ನಾಡಿದ್ದ ಶಾ ಇತ್ತೀಚೆಗಷ್ಟೇ ನ್ಯೂಝಿಲ್ಯಾಂಡ್ ವಿರುದ್ಧ ಏಕದಿನ ಕ್ರಿಕೆ ಟ್‌ಗೆ ಕಾಲಿಟ್ಟಿದ್ದರು. ನ್ಯೂಝಿಲ್ಯಾಂಡ್ ‘ಎ’ ತಂಡದ ವಿರುದ್ಧ್ದ ದ್ವಿಶತಕ ಹಾಗೂ ಶತಕ ಸಿಡಿಸಿರುವ ಶುಭಮನ್ ಗಿಲ್‌ರಿಂದ ಶಾ ಸ್ಪರ್ಧೆ ಎದುರಿಸುತ್ತಿದ್ದಾರೆ. ಆದರೆ, ಶಾ ಅವಕಾಶ ಪಡೆಯಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಸುಳಿವು ನೀಡಿದ್ದಾರೆ.

  ಮೊಣಕಾಲು ನೋವಿನಿಂದ ಚೇತರಿಸಿಕೊಂಡಿರುವ ಇಶಾಂತ್ ಶರ್ಮಾ ಟೆಸ್ಟ್ ಪಂದ್ಯಕ್ಕೆ ಎರಡು ದಿನಗಳಿರುವಾಗ ಸುದೀರ್ಘ ನೆಟ್ ಅಭ್ಯಾಸ ನಡೆಸಿದ್ದರು. ಆದರೆ, ಪಂದ್ಯಕ್ಕಾಗಿ ಅವರು ನೆಟ್ ಅಭ್ಯಾಸ ನಡೆಸಿಲ್ಲ. ಒಂದು ವೇಳೆ ಇಶಾಂತ್ ಫಿಟ್ನೆಸ್ ಟೆಸ್ಟ್ ನಲ್ಲಿ ಪಾಸಾಗದಿದ್ದರೆ, ಉಮೇಶ್ ಯಾದವ್ ಆಡುವ 11ರ ಬಳಗ ಸೇರಬಹುದು. ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ ಹಾಗೂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತ ಬೌಲಿಂಗ್ ವಿಭಾಗದಲ್ಲಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ್ದ ಹನುಮ ವಿಹಾರಿ ಆರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಟಿಮ್ ಸೌಥಿ ಹಾಗೂ ಬೌಲ್ಟ್ ನ್ಯೂಝಿಲ್ಯಾಂಡ್‌ನ ಬೌಲಿಂಗ್ ದಾಳಿ ಆರಂಭಿಸಲಿದ್ದು, ನೀಲ್ ವಾಗ್ನರ್ ಬದಲಿಗೆ ಮ್ಯಾಟ್ ಹೆನ್ರಿ ತಂಡವನ್ನು ಸೇರಿದ್ದಾರೆ. ಹೊಸ ಮುಖ ಕೈಲ್ ಜಮೀಸನ್ ಕೂಡ ತಂಡದಲ್ಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ನ್ಯೂಝಿಲ್ಯಾಂಡ್ ತಂಡ ಅಜಾಝ್ ಪಟೇಲ್ ಹಾಗೂ ಟಾಡ್ ಅಸ್ಟ್ಲೆಗೆ ಅವಕಾಶ ನೀಡಬಹುದು. ನ್ಯೂಝಿಲ್ಯಾಂಡ್ 2017ರ ಮಾರ್ಚ್‌ನಲ್ಲಿ ಕೊನೆಯ ಬಾರಿ ಸ್ವದೇಶದಲ್ಲಿ ಟೆಸ್ಟ್ ಪಂದ್ಯವನ್ನು ಸೋತಿದೆ. ಆ ಬಳಿಕ ಆಡಿರುವ 10 ಟೆಸ್ಟ್ ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿದೆ. ಆಸ್ಟ್ರೇಲಿಯದಲ್ಲಿ ಕಳೆದ ವರ್ಷ ಆಸೀಸ್ ವಿರುದ್ಧ 0-3 ಅಂತರದಿಂದ ಸೋತಿರುವ ಕಿವೀಸ್ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಇಲ್ಲಿನ ಬಾಸಿನ್ ರಿಸರ್ವ್ ಮೈದಾನದಲ್ಲಿ ಗಾಳಿ ವೇಗವಾಗಿ ಬೀಸುವ ಕಾರಣ ಬ್ಯಾಟ್ಸ್ ಮನ್ ಹಾಗೂ ಬೌಲರ್‌ಗಳಿಗೆ ಸವಾಲಾಗಿದೆ. ನ್ಯೂಝಿಲ್ಯಾಂಡ್ ನಾಲ್ವರು ಪ್ರಮುಖ ವೇಗಿಗಳು ಹಾಗೂ ಐದನೇ ವೇಗಿಯಾಗಿ ಆಲ್‌ರೌಂಡರ್ ಗ್ರಾಂಡ್‌ಹೋಮ್ರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News