ಮಹಿಳೆಯನ್ನು ನಾಯಿಗೆ ಹೋಲಿಸಿ ತನ್ನನ್ನು `ಹೆಮ್ಮೆಯ ಹಿಂದು' ಎಂದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲ್ ಕೃಷ್ಣ

Update: 2020-02-21 10:35 GMT

ಹೊಸದಿಲ್ಲಿ: ಟ್ವಿಟರ್‍ ನಲ್ಲಿ ಮಹಿಳೆಯನ್ನು ನಾಯಿಗೆ ಹೋಲಿಸಿದ ಹಾಗೂ ತನ್ನನ್ನು `ಹೆಮ್ಮೆಯ ಹಿಂದು' ಎಂದು ಕರೆಸಿಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲ್ ಕೃಷ್ಣ ಅಗರ್ವಾಲ್ ಅವರನ್ನು ಬಾಲಿವುಡ್ ನಟಿ ಸ್ವರ ಭಾಸ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.

"ಮುಟ್ಟಾದ ಮಹಿಳೆಯರು ಅಡುಗೆ ಮಾಡಿದರೆ ಮುಂದೆ ಹೆಣ್ಣು ನಾಯಿಗಳಾಗಿ ಹುಟ್ಟುತ್ತಾರೆ'' ಎಂದು  ಸ್ವಾಮಿ ಕೃಷ್ಣಸ್ವರೂಪ್ ದಾಸ್‍ ಜಿ ಹೇಳಿದ್ದನ್ನು ಟೀಕಿಸಿದ್ದ ಲೇಖಕಿ ಶುನಾಲಿ ಖುಲ್ಲರ್ ಶ್ರಾಫ್ ಟ್ವಿಟರ್‍ ನಲ್ಲಿ ಎರಡು ನಾಯಿಗಳಿರುವ ಚಿತ್ರ ಶೇರ್ ಮಾಡಿದ್ದರು. ``ಮುಟ್ಟಾಗಿದ್ದ ವೇಳೆ ತಮ್ಮ ಪತಿಯಂದಿರಿಗೆ ಅಡುಗೆ ಮಾಡಿ ಹಾಕಿ ಹೆಣ್ಣು ನಾಯಿಗಳಾದ ಇಬ್ಬರು ಮಹಿಳೆಯರ ಚಿತ್ರವಿದು. ಅವರು ವರ್ತಿಸುವ ರೀತಿ ನೋಡಿದಾಗ ಅವರು ತಮ್ಮ ಕೃತ್ಯಕ್ಕೆ ಪರಿತಪಿಸುತ್ತಿರುವಂತೆ ಕಾಣಿಸುತ್ತದೆ'' ಎಂದು ವ್ಯಂಗ್ಯವಾಗಿ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲ್ ಕೃಷ್ಣ ಅಗರ್ವಾಲ್, "ನೀವು ಯಾವ ನಾಯಿ ಜತೆ ನಿಮ್ಮನ್ನು  ಹೋಲಿಕೆ ಮಾಡುತ್ತೀರಿ'' ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ ಸ್ವರಾ ಭಾಸ್ಕರ್, "ಇದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯೊಬ್ಬರನ್ನು ನಿಂದಿಸುತ್ತಿರುವುದು.  ನೀವು ನಿಮ್ಮ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕು ಅಗರ್ವಾಲ್‍ಜೀ'' ಎಂದು ಬರೆದಿದ್ದಾರೆ.

ಆದರೆ ಅಗರ್ವಾಲ್ ಮಾತ್ರ ತನ್ನ ಹೇಳಿಕೆಗೆ  ವಿಷಾದ ವ್ಯಕ್ತಪಡಿಸುವ ಗೋಜಿಗೆ ಹೋಗದೆ ತಮ್ಮನ್ನು ಸಮರ್ಥಿಸಲು ನಿಂತಿದ್ದಾರೆ. "ಎಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೇವರುಗಳಿರುತ್ತಾರೆ. ಆದರೆ ಶುನಾಲಿ ಶ್ರಾಫ್ ಹಾಗೂ ಸ್ವರಾ ಇದನ್ನು ಹೇಳುವುದಿಲ್ಲ, ಆದರೆ ಇಂದು ಹಿಂದು ಧರ್ಮದಲ್ಲಿ ಹೆಚ್ಚು ಪ್ರಸ್ತುತವಲ್ಲದ ಕೆಲವನ್ನು ಉಲ್ಲೇಖಿಸಿ ನಿಂದಿಸುತ್ತಾರೆ'' ಎಂದು ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News