ಅಹ್ಮದಾಬಾದ್‌ನಲ್ಲಿ ‘ಅಪರಿಚಿತ ಗುಂಪಿನಿಂದ’ ಟ್ರಂಪ್ ಕಾರ್ಯಕ್ರಮದ ಆಯೋಜನೆ!

Update: 2020-02-21 14:21 GMT
ಫೈಲ್ ಚಿತ್ರ

ಅಹ್ಮದಾಬಾದ್,ಫೆ.21: ಇಲ್ಲಿಯ ಮೊಟೆರಾ ಕ್ರೀಡಾಂಗಣದಲ್ಲಿ ಫೆ.24ರಂದು ನಡೆಯಲಿರುವ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಅಪರಿಚಿತ ವ್ಯಕ್ತಿಗಳ ಗುಂಪೊಂದು ಆಯೋಜಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ ರಾಜತಾಂತ್ರಿಕತೆಯು ಗಂಭೀರ ಸರಕಾರಿ ವ್ಯವಹಾರವಾಗಿದೆ ಎಂದು ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನಪಿಸಿದೆ.

ಡೊನಾಲ್ಡ್ ಟ್ರಂಪ್ ನಾಗರಿಕ ಅಭಿವಾದನ ಸಮಿತಿಯು ಕಾರ್ಯಕ್ರಮವನ್ನು ಸಂಘಟಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ ಕುಮಾರ ಅವರು ಮಾಧ್ಯಮಗಳಿಗೆ ತಿಳಿಸಿದರಾದರೂ ಹೆಚ್ಚಿನ ವಿವರಗಳನ್ನು ಒದಗಿಸಲಿಲ್ಲ.

ಕಾರ್ಯಕ್ರಮದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿರುವ ಹಿರಿಯ ಅಧಿಕಾರಿಗಳು ಮತ್ತು ಇತರ ಏಜೆನ್ಸಿಗಳು ಇಂತಹ ಸಮಿತಿಯ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದರೆ,ಇಂತಹ ಸಮಿತಿಯೊಂದು ಇದೆ ಎಂದು ತನಗೆ ಇಂದೇ ಗೊತ್ತಾಗಿದೆ ಎಂದು ಅಹ್ಮದಾಬಾದ್‌ನ ಅಧಿಕಾರಿಯೋರ್ವರು ತಿಳಿಸಿದರು.

ಇಂತಹ ಯಾವುದೇ ಸಮಿತಿಯ ಬಗ್ಗೆ ತನಗೆ ಮಾಹಿತಿಯಿಲ್ಲ ಎಂಂದು ಹೇಳಿದ ಗುಜರಾತ್ ರಾಜ್ಯ ಅನಿವಾಸಿ ಗುಜರಾತಿಗಳ ಪ್ರತಿಷ್ಠಾನದ ಅಧ್ಯಕ್ಷ ಧನಂಜಯ ದ್ವಿವೇದಿ ಅವರು,ನಾವು ಜಿಲ್ಲಾಮಟ್ಟದ ನಿಯೋಗಗಳು ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರನ್ನು ನಿರ್ವಹಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮದ ಸಂಘಟಕರಿಗೆ ಮಹತ್ವ ನೀಡುವುದಕ್ಕಿಂತ ಟ್ರಂಪ್ ಅವರಿಗೆ ಭವ್ಯ ಸ್ವಾಗತ ನೀಡುವುದು ಮುಖ್ಯವಾಗಿದೆ ಎಂದು ಹೇಳಿದ ರಾಜ್ಯ ಬಿಜೆಪಿ ವಕ್ತಾರ ಭರತ ಪಾಂಡ್ಯ ಅವರು,ಟ್ರಂಪ್ ಭೇಟಿಯು ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಉದ್ಯಮ ಸಂಬಂಧಗಳನ್ನು ಹೆಚ್ಚಿಸಲಿದೆ. ಅಮೆರಿಕದಲ್ಲಿ ಲಕ್ಷಾಂತರ ಗುಜರಾತಿಗಳು ವಾಸವಾಗಿದ್ದಾರೆ ಮತ್ತು ನಮಸ್ತೆ ಟ್ರಂಪ್ ಕಾರ್ಯಕ್ರಮವು ಅಲ್ಲಿ ಅವರ ಮಹತ್ವವನ್ನು ಹೆಚ್ಚಿಸಲಿದೆ ಎಂದರು.

ಕಾಂಗ್ರೆಸ್ ಟೀಕೆ

ಅಪರಿಚಿತ ಖಾಸಗಿ ಸಂಘಟನೆಯೊಂದು ಆಯೋಜಿಸಿರುವ ಮೂರು ಗಂಟೆಗಳ ಟ್ರಂಪ್ ಕಾರ್ಯಕ್ರಮಕ್ಕೆ ರಾಜ್ಯ ಸರಕಾರವೇಕೆ 120 ಕೋ.ರೂ.ಗಳನ್ನು ವ್ಯಯಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಸರಕಾರ ಮತ್ತು ಮೋದಿಯವರನ್ನು ಪ್ರಶ್ನಿಸಿದೆ.

ಭಾರತವು ತನ್ನ ಗಣ್ಯ ಅತಿಥಿಗಳನ್ನು ಗೌರವಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ ಸಿಂಗ್ ಸುರ್ಜೆವಾಲಾ ಅವರು ಹೇಳಿದರಾದರೂ,ರಾಜತಾಂತ್ರಿಕತೆಯು ಗಂಭೀರ ಸರಕಾರಿ ವ್ಯವಹಾರವಾಗಿದೆ ಮತ್ತು ಅದು ಸರಣಿ ಫೋಟೊಗ್ರಫಿ ಅಥವಾ ಕಾರ್ಯಕ್ರಮ ನಿರ್ವಹಣೆ ತಂತ್ರಗಳಲ್ಲ್ಲ ಎನ್ನುವುದನ್ನು ಮೋದಿಯವರು ಗಮನಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News