ಆರೆಸ್ಸೆಸ್ ಕೇಂದ್ರ ಕಚೇರಿ ಸಮೀಪ ಸಮಾವೇಶ ನಡೆಸಲು ಭೀಮ್ ಆರ್ಮಿಗೆ ಹೈಕೋರ್ಟ್ ಅನುಮತಿ

Update: 2020-02-21 15:47 GMT

ನಾಗಪುರ, ಫೆ. 21: ಇಲ್ಲಿನ ರೇಶಿಮ್‌ಬಾಗ್ ಮೈದಾನದಲ್ಲಿ ಫೆಬ್ರವರಿ 22ರಂದು ತನ್ನ ಕಾರ್ಯಕರ್ತರ ಸಮಾವೇಶ ನಡೆಸಲು ಭೀಮ್ ಆರ್ಮಿಗೆ ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರ ಪೀಠ ಶುಕ್ರವಾರ ಅನುಮತಿ ನೀಡಿದೆ. ಆದರೆ, ನಿರ್ದಿಷ್ಟ ಶರತ್ತುಗಳನ್ನು ವಿಧಿಸಿದೆ.

ಸಮಾವೇಶಕ್ಕೆ ಅನುಮತಿ ನೀಡುವಂತೆ ಕೋರಿ ಭೀಮ್ ಆರ್ಮಿ ಮನವಿ ಸಲ್ಲಿಸಿತ್ತು. ಈ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ಶುಕ್ರೆ ಹಾಗೂ ಮಾಧವ್ ಜಾಮ್‌ ದಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಿರ್ದಿಷ್ಟ ಶರತ್ತಿನೊಂದಿಗೆ ಅನುಮತಿ ನೀಡಿತು. ಈ ಸಮಾವೇಶದಲ್ಲಿ ಭೀಮ್ ಆರ್ಮಿಯ ವರಿಷ್ಠ ಚಂದ್ರಶೇಖರ್ ಆಝಾದ್ ಪಾಲ್ಗೊಳ್ಳಲಿದ್ದಾರೆ.

ಭೀಮ್ ಆರ್ಮಿಯ ಪದಾಧಿಕಾರಿಗಳು ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಹಾಗೂ ನಾಗಪುರದ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಮಂಗಳವಾರ ನೋಟಿಸು ಜಾರಿ ಮಾಡಿತ್ತು. ಸಮಾವೇಶ ನಡೆಯಲಿರುವ ಮೈದಾನ ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿಗೆ ಸಮೀಪದಲ್ಲಿ ಇದೆ. ಆದುದರಿಂದ ಕಾನೂನು ಸುವ್ಯವಸ್ಥೆ ಉಲ್ಲೇಖಿಸಿ ಅನುಮತಿ ನೀಡಲು ಈ ಹಿಂದೆ ಕೊಟ್ವಾಲಿ ಪೊಲೀಸರು ನಿರಾಕರಿಸಿದ್ದರು. ಅನುಮತಿ ನಿರಾಕರಿಸಿದ ಬಳಿಕ ಭೀಮ್ ಆರ್ಮಿ ನಾಗಪುರದ ಹೈಕೋರ್ಟ್ ಪೀಠದ ಮೆಟ್ಟಿಲೇರಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News