‘ಶಾಹೀನ್‌ಬಾಗ್ ನೈಟ್’ ಆಯೋಜಿಸಿದ್ದಕ್ಕೆ ಹೈದರಾಬಾದ್ ವಿವಿಯ ಮೂವರು ವಿದ್ಯಾರ್ಥಿಗಳಿಗೆ 5,000 ರೂ.ದಂಡ

Update: 2020-02-21 15:55 GMT
ಫೈಲ್ ಚಿತ್ರ

ಹೈದರಾಬಾದ್,ಫೆ.21: ವಿವಿಯ ನಿಬಂಧನೆಗಳನ್ನು ಉಲ್ಲಂಘಿಸಿ ಕ್ಯಾಂಪಸ್‌ನಲ್ಲಿ ರಾತ್ರಿ ಒಂಭತ್ತು ಗಂಟೆಯ ನಂತರ ಸಿಎಎ ವಿರುದ್ಧ ‘ಶಾಹೀನ್‌ ಬಾಗ್ ನೈಟ್’ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಹೈದರಾಬಾದ್ ವಿವಿಯು ಮೂವರು ವಿದ್ಯಾರ್ಥಿಗಳಿಗೆ ತಲಾ 5,000 ರೂ. ದಂಡವನ್ನು ವಿಧಿಸಿದೆ. ವಿದ್ಯಾರ್ಥಿಗಳ ಯೂನಿಯನ್ ಈ ಕ್ರಮವನ್ನು ಖಂಡಿಸಿದೆ.

 ಜ.31ರಂದು ರಾತ್ರಿ ನಾರ್ಥ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ನಸುಕಿನ 2:30ರವರೆಗೂ ನಡೆದಿತ್ತು ಮತ್ತು ಸ್ಥಳದಲ್ಲಿಯ ಗೋಡೆಗಳನ್ನೂ ವಿರೂಪಗೊಳಿಸಲಾಗಿತ್ತು. ಭವಿಷ್ಯದಲ್ಲಿ ಎಚ್ಚರಿಕೆಯಿಂದಿರುವಂತೆ ಮತ್ತು ವ್ಯಾಸಂಗದ ಕಡೆಗೆ ಗಮನವನ್ನು ಹರಿಸುವಂತೆ ಫೆ.18ರ ಆದೇಶದಲ್ಲಿ ವಿದ್ಯಾರ್ಥಿಗಳಿಗೆ ಕಠಿಣ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ವಿವಿ ಮೂಲಗಳು ತಿಳಿಸಿದವು.

 ಆದೇಶವು ನಿರಂಕುಶತೆಯಿಂದ ಕೂಡಿದೆ ಮತ್ತು ತಾವು ಅದನ್ನು ಪಾಲಿಸುವುದಿಲ್ಲ ಎಂದು ಹೇಳಿರುವ ವಿದ್ಯಾರ್ಥಿಗಳ ಯೂನಿಯನ್,ದಂಡವನ್ನು ಬೇಷರತ್ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದೆ. ವಿವಿ ಆಡಳಿತಕ್ಕೆ ತಾವು ಬಗ್ಗುವುದಿಲ್ಲ ಮತ್ತು ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಿತಾಸಕ್ತಿಗಳ ರಕ್ಷಣೆಗಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದೂ ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News