ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕುರಿತು ವಿವಾದಾತ್ಮಕ ಆದೇಶ ಹಿಂಪಡೆದ ಮ.ಪ್ರದೇಶ

Update: 2020-02-21 16:15 GMT

ಭೋಪಾಲ,ಫೆ.21: ಭಾರೀ ವಿವಾದಕ್ಕೆ ಕಾರಣವಾಗಿದ್ದ,ಆರೋಗ್ಯ ಕಾರ್ಯಕರ್ತರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳ ತಮ್ಮ ಗುರಿಯನ್ನು ಸಾಧಿಸಲು ವಿಫಲಗೊಂಡರೆ ವೇತನ ಕಡಿತ ಮತ್ತು ಕಡ್ಡಾಯ ನಿವೃತ್ತಿಯ ಎಚ್ಚರಿಕೆಯನ್ನು ನೀಡಿ ಹೊರಡಿಸಿದ್ದ ಸುತ್ತೋಲೆಯನ್ನು ಮಧ್ಯಪ್ರದೇಶ ಸರಕಾರವು ಹಿಂದೆಗೆದುಕೊಂಡಿದೆ. ಆದೇಶದ ಹಿನ್ನೆಲೆಯಲ್ಲಿ ಬಿಜೆಪಿಯು 1975ರ ತುರ್ತುಸ್ಥಿತಿಯನ್ನು ಪ್ರಸ್ತಾಪಿಸುವ ಮೂಲಕ ಮುಖ್ಯಮಂತ್ರಿ ಕಮಲನಾಥ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು.

ರಾಜ್ಯವು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳ ಗುರಿಯ ಸಾಧನೆಯಲ್ಲಿ ಕೊರತೆಯನ್ನು ಎದುರಿಸುತ್ತದೆ ಎಂಬ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯ ಬಳಿಕ ರಾಜ್ಯ ಸರಕಾರವು ಹೊರಡಿಸಿದ್ದ ಆದೇಶದಲ್ಲಿ ,ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕನಿಷ್ಠ ಓರ್ವ ವ್ಯಕ್ತಿಯನ್ನೂ ಮನವೊಲಿಸದ ಆರೋಗ್ಯ ಕಾರ್ಯಕರ್ತರು ಅಮಾನತು,ವೇತನ ಕಡಿತವನ್ನು ಎದುರಿಸಬೇಕಾಗುತ್ತದೆ,ಕಡ್ಡಾಯ ನಿವೃತ್ತಿಗೂ ಗುರಿಯಾಗಬಹುದು ಎಂದು ತಿಳಿಸಲಾಗಿತ್ತು.

 ಈ ವಿಷಯ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಆದೇಶವನ್ನು ಹಿಂದೆಗೆದುಕೊಳ್ಳಲಾಗಿದ್ದು,ಸುತ್ತೋಲೆಗೆ ಕಾರಣರಾದ ಅಧಿಕಾರಿಯ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಿಸಲಾಗಿದೆ. ಸುತ್ತೋಲೆಯು ಮುಖ್ಯಮಂತ್ರಿಗಳ ಗಮನಕ್ಕೆ ಬಂದ ತಕ್ಷಣ ಅದನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

  ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಯಾರನ್ನೂ ಬಲವಂತಗೊಳಿಸುವುದಿಲ್ಲ. ಯಾರೂ ಉದ್ಯೋಗಗಳನ್ನು ಕಳೆದುಕೊಳ್ಳುವುದಿಲ್ಲ. ಕೇವಲ ಕುಟುಂಬ ಕಲ್ಯಾಣ ಯೋಜನೆಯ ಬಗ್ಗೆ ಜಾಗ್ರತಿಯನ್ನು ಮೂಡಿಸಲಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವ ತುಳಸಿರಾಮ ಸಿಲಾವಟ್ ತಿಳಿಸಿದರು.

ಫೆ.11ರಂದು ರಾಜ್ಯ ಸರಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕರು ಹೊರಡಿಸಿದ್ದ ಸುತ್ತೋಲೆಯು ಆರೋಗ್ಯ ಕಾರ್ಯಕರ್ತರು ಪ್ರತಿ ವರ್ಷ 5ರಿಂದ 10 ಪುರುಷರನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕರೆತರುವುದು ಕಡ್ಡಾಯವಾಗಿದೆ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News