ಪ್ರವೇಶ ಅರ್ಜಿಯಲ್ಲಿ ‘ಧರ್ಮ’ ಉಲ್ಲೇಖಿಸದ ಕಾರಣ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ಶಾಲೆ

Update: 2020-02-21 18:13 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ, ಫೆ. 21: ಪ್ರವೇಶ ಅರ್ಜಿಯಲ್ಲಿ ಹೆತ್ತವರು ‘ಧರ್ಮ’ದ ಕಾಲಂ ಅನ್ನು ಭರ್ತಿಗೊಳಿಸಿಲ್ಲ ಎನ್ನುವ ಕಾರಣಕ್ಕೆ ಮಗುವಿಗೆ ಶಾಲೆ ಪ್ರವೇಶ ನಿರಾಕರಿಸುವ ಮೂಲಕ ಇಲ್ಲಿನ ಸರಕಾರ ಅನುದಾನಿತ ಶಾಲೆ ವಿವಾದಕ್ಕೆ ಒಳಗಾಗಿದೆ.

ಪ್ರವೇಶ ಅರ್ಜಿಯಲ್ಲಿ ‘ಧರ್ಮ’ದ ಕಾಲಂ ಅನ್ನು ಭರ್ತಿಗೊಳಿಸುವ ಅಗತ್ಯ ಇದೆ ಎಂದು ತಿರುವನಂತಪುರ ಪಟ್ಟಾಂನ ಸಂತ ಮೇರಿ ಪ್ರೌಢ ಶಾಲೆಯ ಆಡಳಿತ ನಸೀಮ್ ಹಾಗೂ ಅವರ ಪತ್ನಿ ಧನ್ಯಾ ಅವರಿಗೆ ಸೂಚಿಸಿತ್ತು. ಅಂತರ್ ಧರ್ಮೀಯ ವಿವಾಹಿತರಾದ ಈ ದಂಪತಿ ಧರ್ಮದ ಕಾಲಂ ಅನ್ನು ಉದ್ದೇಶಪೂರ್ವಕವಾಗಿ ಭರ್ತಿ ಮಾಡಿರಲಿಲ್ಲ.

ಈ ಶಾಲೆಯನ್ನು ಸಿರೋ ಮಲಂಕರ ಕೆಥೋಲಿಕ್ ಚರ್ಚ್ ನಿರ್ವಹಿಸುತ್ತಿದೆ ಹಾಗೂ ರಾಜ್ಯ ಸರಕಾರದ ಅನುದಾನ ನೀಡುತ್ತಿದೆ. ಶಾಲೆಯ ಕ್ರಮವನ್ನು ದಂಪತಿ ಪ್ರಶ್ನಿಸಿದಾಗ ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶಾಲೆಯ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿದರು. ಅಲ್ಲದೆ, ಧರ್ಮವನ್ನು ಯಾಕೆ ಉಲ್ಲೇಖಿಸಿಲ್ಲ ಎಂದು ಅಫಿದಾವಿತ್ ಸಲ್ಲಿಸುವಂತೆ ಸೂಚಿಸಿದ್ದರು ಎಂದು ನಸೀಮ್ ಹೇಳಿದ್ದಾರೆ.

ಪ್ರವೇಶ ಅರ್ಜಿಯಲ್ಲಿ ‘ಧರ್ಮ’ ದಾಖಲಿಸದೆ ಶಾಲೆಯಲ್ಲಿ ಪ್ರವೇಶ ನೀಡಲು ಯಾಕೆ ಸಾಧ್ಯವಿಲ್ಲ ಎಂಬ ಬಗ್ಗೆ ಸರಕಾರ ಸ್ಪಷ್ಟನೆ ನೀಡುವಂತೆ ದಂಪತಿ ಆಗ್ರಹಿಸಿದ್ದಾರೆ. ದಂಪತಿಯ ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಲೆ ಮಗುವನ್ನು ದಾಖಲಿಸಿಕೊಳ್ಳಲು ನಿರ್ಧರಿಸಿದೆ. ಆದರೆ, ನಸೀಮ್ ಹಾಗೂ ಧನ್ಯಾ ಮಗುವನ್ನು ಆ ಶಾಲೆಯಲ್ಲಿ ದಾಖಲಿಸದಿರಲು ನಿರ್ಧರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News