ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಮಹಿಳಾ ಅಧಿಕಾರಿಯನ್ನು ವಜಾಗೊಳಿಸಿದ ಸಾಹಿತ್ಯ ಅಕಾಡಮಿ

Update: 2020-02-21 18:29 GMT

ಹೊಸದಿಲ್ಲಿ, ಫೆ. 21: ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕೆ. ಶ್ರೀನಿವಾಸ್ ರಾವ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಮಹಿಳಾ ಅಧಿಕಾರಿಯನ್ನು ಅವರ ಎರಡು ವರ್ಷಗಳ ಪರೀಕ್ಷಾರ್ಥ ಅವಧಿ ಪೂರ್ಣಗೊಳ್ಳುವ ಒಂದು ದಿನ ಮೊದಲು ಸಾಹಿತ್ಯ ಅಕಾಡೆಮಿ ವಜಾಗೊಳಿಸಿದೆ.

ಈ ಪ್ರಕರಣದ ವಿಚಾರಣೆ ಬಾಕಿ ಇರುವಾಗ ಹಾಗೂ ಮಾರ್ಚ್ 16ರ ವರೆಗೆ 3 ತಿಂಗಳ ಪಾವತಿ ರಜೆ ತೆಗೆದುಕೊಳ್ಳಲು ದೂರದಾರ ಮಹಿಳೆಗೆ ದಿಲ್ಲಿ ಉಚ್ಚ ನ್ಯಾಯಾಲಯ ಅನುಮತಿ ನೀಡಿರುವಾಗಲೂ ಈ ಆದೇಶ ಹೊರಬಿದ್ದಿದೆ. ತಾನು ಉದ್ಯೋಗ ಮಾಡಲು ಆರಂಭಿಸಿದಂದಿನಿಂದ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕೆ. ಶ್ರೀನಿವಾಸ ರಾವ್ ಅವರಿಂದ ಹಲವು ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿ ಸಾಹಿತ್ಯ ಅಕಾಡೆಮಿಯ ಉಪ ಕಾರ್ಯದರ್ಶಿ ಮಟ್ಟದ ಹುದ್ದೆ ನಿರ್ವಹಿಸುತ್ತಿದ್ದ ಮಹಿಳೆ 2018 ಫೆಬ್ರವರಿಯಲ್ಲಿ ದೂರು ನೀಡಿದ್ದರು.

ಕೆ. ಶ್ರೀನಿವಾಸ್ ರಾವ್ ಅವರು ತನ್ನ ಉಸ್ತುವಾರಿ ಅಧಿಕಾರಿಯಾದಂದಿನಿಂದ ತನ್ನ ಕೆಲಸದ ಸಂಪೂರ್ಣ ನಿಯಂತ್ರಣ ಅವರ ಕೈಯಲ್ಲಿ ಇತ್ತು. ಅಲ್ಲದೆ ತಾನು ಸಹಕರಿಸದೇ ಇದ್ದರೆ ಸಾಹಿತ್ಯ ಅಕಾಡೆಮಿಯಲ್ಲಿ ತನ್ನ ಉದ್ಯೋಗ ಹಾಗೂ ವೃತ್ತಿಜೀವನಕ್ಕೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ಎಂದು ಅವರು ಬೆದರಿಕೆ ಒಡ್ಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಸಾಹಿತ್ಯ ಅಕಾಡೆಮಿಗೆ ಕೆಲಸಕ್ಕೆ ಸೇರಿದ ಕೇವಲ ಒಂದು ತಿಂಗಳಲ್ಲಿ ಅಸ್ಸಾಂ ಮೂಲದ ಈ ಮಹಿಳೆ ಅಕಾಡೆಮಿಯ ಕಾರ್ಯದರ್ಶಿ ಕೆ. ಶ್ರೀನಿವಾಸ ರಾವ್ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ ದೂರಿನಲ್ಲಿ ಅವರು, ಈಶಾನ್ಯ ಭಾರತದಿಂದ ಮುಖ್ಯವಾಗಿ ಅಸ್ಸಾಂನಿಂದ ಆಗಮಿಸಿದ ಮಹಿಳೆಯರ ಬಗ್ಗೆ ಸೆಕ್ರೆಟರಿ ಕೆ. ಶ್ರೀನಿವಾಸ ರಾವ್ ಅವರು ಅಶ್ಲೀಲ ಹೇಳಿಕೆ ಹಾಗೂ ಜನಾಂಗೀಯ ನಿಂದನೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News