ಅಮು ವಿದ್ಯಾರ್ಥಿಗಳ ವಿರುದ್ಧ ಆದಿತ್ಯನಾಥ್ ನೀಡಿದ ಹೇಳಿಕೆ ಹಿಂದೆಗೆಯುವಂತೆ ಅಧ್ಯಾಪಕರ ಸಂಘಟನೆ ಆಗ್ರಹ

Update: 2020-02-21 19:05 GMT

ಅಲಿಗಡ, ಫೆ. 21: ಕಳೆದ ವರ್ಷ ಡಿಸೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆದ ಸಂದರ್ಭ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಲಿಗಢ ನಗಕ್ಕೆ ಬೆಂಕಿಹಚ್ಚಲು ಬಯಸಿದ್ದರು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಹೇಳಿಕೆಗೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘಟನೆ ತೀವ್ರ ಅಸಮಾದಾನ ವ್ಯಕ್ತಪಡಿಸಿದೆ.

ಬುಧವಾರ ಉತ್ತರಪ್ರದೇಶದ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದಾನಾ ಗೊತ್ತುವಳಿ ಮೇಲೆ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್, ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಹಿಂಸಾಚಾರದ ಬಳಿಕ ನಾನು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ಮುನ್ನೆಚ್ಚರಿಕೆ ನೀಡಿದ್ದೆ ಎಂದಿದ್ದರು.

ಬೀದಿಗಿಳಿದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ 15 ಸಾವಿರ ವಿದ್ಯಾರ್ಥಿಗಳು ಅಲಿಗಢ ನಗರವನ್ನು ದಹಿಸಲು ಬಯಸಿದ್ದರು. ಆದರೆ, ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದುದರಿಂದ ಅವರ ಯೋಜನೆ ವಿಫಲವಾಯಿತು ಎಂದು ಅವರು ಹೇಳಿದ್ದರು.

ಮುಖ್ಯಮಂತ್ರಿ ಆದಿತ್ಯನಾಥ್ ಅವರ ಹೇಳಿಕೆ ಬೇಜವಾಬ್ದಾರಿಯುತ ಹಾಗೂ ಸತ್ಯದ ತಿರುಚುವಿಕೆ ಎಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಅಧ್ಯಾಪಕರು ಹೇಳಿದ್ದಾರೆ. ಸತ್ಯವನ್ನು ಪರಿಶೀಲಿಸದೇ ಉನ್ನತ ಶಿಕ್ಷಣದ ಪ್ರಮುಖ ಸಂಸ್ಥೆಯ ಗೌರವಕ್ಕೆ ಧಕ್ಕೆ ಉಂಟು ಮಾಡಿರುವುದು ಖಂಡನೀಯ. ಮುಖ್ಯಮಂತ್ರಿ ತನ್ನ ಹೇಳಿಕೆಯನ್ನು ಹಿಂದೆಗೆದುಕೊಳ್ಳಬೇಕು ಎಂದು ರಾಷ್ಟ್ರಪತಿ ಅವರಿಗೆ ಗುರುವಾರ ರವಾನಿಸಿದ ಪತ್ರದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ ಅಧ್ಯಾಪಕ ಸಂಘಟನೆಯ ಅಧ್ಯಕ್ಷೆ ನಜ್ಮುಲ್ ಇಸ್ಲಾಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News