ಅಯೋಧ್ಯೆ ಪ್ರಕರಣ: ಪರ್ಯಾಯ ಭೂಮಿ ಸ್ವೀಕಾರ, ಬಳಕೆ ಬಗ್ಗೆ ಸೋಮವಾರ ನಿರ್ಧಾರ; ಸುನ್ನಿ ಕೇಂದ್ರ ವಕ್ಫ್ ಮಂಡಳಿ

Update: 2020-02-22 03:41 GMT

ಲಕ್ನೊ, ಪೆ. 21: ಸುಪ್ರೀಂ ಕೋರ್ಟ್ ಅಯೋಧ್ಯೆ ತೀರ್ಪಿಗೆ ಅನುಗುಣವಾಗಿ ನೀಡಿರುವ ಪರ್ಯಾಯ ಭೂಮಿಯನ್ನು ಸ್ವೀಕರಿಸುತ್ತೇವೆ. ಆದರೆ, ಅದನ್ನು ಬಳಸಿಕೊಳ್ಳುವ ಬಗ್ಗೆ ಸೋಮವಾರ ನಡೆಯುವ ಸಭೆಯಲ್ಲಿ ನಿರ್ಧರಿಸಲಿದ್ದೇವೆ ಎಂದು ಉತ್ತರಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಶುಕ್ರವಾರ ಹೇಳಿದೆ.

ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ಕುರಿತು ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತನ್ನ ತೀರ್ಪಿನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಲವು ವ್ಯಕ್ತಪಡಿಸಿತ್ತು ಹಾಗೂ ಮಸೀದಿ ನಿರ್ಮಿಸಲು ಪರ್ಯಾಯವಾಗಿ ಐದು ಎಕರೆ ಭೂಮಿ ನೀಡಿತ್ತು. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಕೂಡಲೇ ಉತ್ತರಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಭೂಮಿ ಸ್ವೀಕರಿಸಬಾರದು ಎಂದು ಸಲಹೆಗಳು ಕೇಳಿ ಬಂದಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ನಿರ್ಮಾಣ ಮಾಡಲು ನೀಡಿದ ಐದು ಎಕರೆ ಭೂಮಿ ನಿರಾಕರಿಸುವ ಯಾವುದೇ ಇರಾದೆ ಇಲ್ಲ. ಯಾಕೆಂದರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಉತ್ತರಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ಝಫರ್ ಅಹ್ಮದ್ ಫಾರೂಕಿ ಹೇಳಿದ್ದಾರೆ.

‘‘ಈ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿಗೆ ನಾವು ಬದ್ದರಾಗಿದ್ದೇವೆ ಎಂದು ಆರಂಭದಿಂದಲೇ ಹೇಳುತ್ತಾ ಬಂದಿದ್ದೇವೆ. ಇದೇ ಕಾರಣಕ್ಕೆ ನಾವು ತೀರ್ಪಿನ ಬಗ್ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’’ ಎಂದು ಅವರು ಹೇಳಿದ್ದಾರೆ. ಆದರೆ, ಸರಕಾರ ನೀಡಿದ ಭೂಮಿಯನ್ನು ಹೇಗೆ ಬಳಸುವು ಎಂಬುದು ತುಂಬಾ ಮುಖ್ಯವಾದದು. ಈ ಬಗ್ಗೆ ಸೋಮವಾರ ನಡೆಯುವ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಸಭೆಯಲ್ಲಿ ನಿರ್ಧರಿಸಲಿದ್ದೇವೆ ಎಂದು ಫಾರೂಕಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News