‘‘ಅಮೂಲ್ಯಳ ದುಡುಕಿಗೆ ನಾನೂ ಹೊಣೆ’’

Update: 2020-02-22 18:37 GMT

ಸಾರ್ತ್ರ್ ‘‘ಹಿಟ್ಲರನ ಉದಯಕ್ಕೆ ನಾನೂ ಹೊಣೆ’’ ಎಂದ; ಅದರ ಅರ್ಥ ಆತನನ್ನು ಬೆಳೆಯಲು ಬಿಟ್ಟ ಸಮಾಜದಲ್ಲಿ ನಾನೂ ಒಬ್ಬನಾಗಿ, ಪಾಲು ನನ್ನದೂ ಇದೆ ಅನ್ನುವ ನೇರ ನಿಷ್ಠೂರ ಜವಾಬ್ದಾರಿ. ನಾನು, ಈ ಚಳವಳಿ ಪ್ರಭುತ್ವದ ಅನ್ಯಾಯದ ವಿರುದ್ಧ ಎಂಬ ನಂಬಿಕೆಯಲ್ಲಿ ಪಾಲ್ಗೊಂಡಿದ್ದೇನೆ; ಆ ಹುಡುಗಿಯೂ ಅದೇ ನಂಬಿಕೆಯಲ್ಲಿ ಪಾಲ್ಗೊಂಡಿದ್ದಾಳೆ; ಸಾರ್ತ್ರ್‌ನ ದನಿಯಲ್ಲಿ ಹೇಳಬೇಕೆಂದರೆ: ‘‘ಅಮೂಲ್ಯಳ ದುಡುಕಿಗೆ ನಾನೂ ಹೊಣೆ’’. ಅಷ್ಟೇ. 


CAA-NPR-NRC ವಿರುದ್ಧ ನಡೆಯುತ್ತಿರುವ ಹೋರಾಟವು, ತಕ್ಷಣದ ಸ್ಫೂರ್ತಿಯಲ್ಲಿ (spontaneously) ಯಾವ ಸಂಘಟನೆ, ಪ್ರಣಾಳಿಕೆ ಬದ್ಧ ಚಳುವಳಿ ಅಥವಾ ಪಕ್ಷಗಳ ನೇತೃತ್ವವಿಲ್ಲದೆ ಪ್ರಕಟವಾಗಿರುವ ಹೋರಾಟ. ಯುವಕರು, ಸಾಮಾನ್ಯ ಜನರೂ, ಒಂದು ನಿರ್ಣಾಯಕ ಕ್ಷಣಕ್ಕೆ ಕಾಯುತ್ತಿದ್ದವರ ಹಾಗೆ ಬೀದಿಗೆ ಬಂದು ಚಳವಳಿಯ ಮಾದರಿಯಾಗುತ್ತಿದ್ದಾರೆ ಎಂಬುದಕ್ಕೆ ಶಾಹೀನ್‌ಬಾಗ್ ಸಾಕ್ಷಿ. ಒಬ್ಬ ಪ್ರಹಸನಕಾರ ಹಾಗೂ ಚಿತ್ರಕತೆ ಬರೆಯುವ ಕಲಾವಿದ ಬರೆದ ಒಂದು ನಜ್ಮ್, ಕೂಡಲೇ ಚಳವಳಿಯ ಘೋಷ ವಾಖ್ಯವಾಗುತ್ತದೆ; ಮರೆತೇ ಹೋಗಿದ್ದ ಫೈಝ್‌ನ ಪದ್ಯವೊಂದು ಹೊಸ ಹುಮ್ಮಸ್ಸಲ್ಲಿ ಜನರ ಬಾಯಲ್ಲಿ ಆಡತೊಡಗುತ್ತದೆ; ಯಾರೂ ಗುರುತಿಸದೇ ಇದ್ದ ಕವಿ ಹಬೀಬ್ ಜಾಲೀಬ್ ಎದ್ದು ಬರುತ್ತಾನೆ; ತಾರೆಗಳು ಆಡಿದ್ದೂ, ಮೌನವಾಗಿ ನಿಂತದ್ದೂ, ಪ್ರತಿಮೆಯಾಗುತ್ತದೆ; ಚಳವಳಿಯ ನಿಧಾನದಲ್ಲಿ ಬೇಯದ ಮಾಜಿ ಅಧಿಕಾರಿಗಳೂ, ಉನ್ನತ ವ್ಯಾಸಂಗ ಪಡೆದು ಸಾರ್ವಜನಿಕವಾಗಿ ಉಪಯುಕ್ತವೆನಿಸುವ ವೃತ್ತಿಯಲ್ಲಿ ತೊಡಗುವ ಉದ್ದೇಶ ಹೊಂದಿದ ಯುವತಿಯೂ, ಸ್ವಯಂ ಸ್ಫೂರ್ತಿಯಲ್ಲಿ ಬಂದು ಚಳವಳಿಯ ಕಣ್ಮಣಿಗಳಾಗುತ್ತಾರೆ; ಹಾಗೆಯೇ, ಹರಳು ಹುರಿದಂತೆ ಮಾತನಾಡುವ, ಸಿಳ್ಳೆ ಚಪಾಳೆ ಗಿಟ್ಟಿಸುವ ಒನ್ ಲೈನರ್ ಎಸೆಯುವ ಯುವ ಜನರೂ ಜನಪ್ರಿಯರಾಗುತ್ತಾರೆ;

ಬುದ್ಧಿಜೀವಿಗಳು ಸ್ವಾಯತ್ತ ಅಧಿಕಾರ ನಿಲುವು ಪ್ರಕಟಿಸುತ್ತಾರೆ; ಇದೆಲ್ಲದರಿಂದ ವಿಚಲಿತವಾದ ಬಲಪಂಥೀಯ ಅಧಿಕಾರವು, ತನ್ನೆಲ್ಲಾ ಕೀಳುತನವನ್ನೂ ಬಹಿರಂಗದಲ್ಲಿ ಬಿಚ್ಚತೊಡಗುತ್ತದೆ; ಸ್ಥಾಪಿತ ಅಧಿಕಾರ ವಿರೋಧಿ ಚಳವಳಿಗಳು, ಯಾವ ಸಮಾಜದ ಮಾನವ ಸಂಪನ್ಮೂಲದಲ್ಲಿ ಇರುವ ಶಕ್ತಿಯಿಂದ ವಂಚಿತವಾಗಿದ್ದವೋ, ಅಂತಹ ಶಕ್ತಿ ಸೆಲೆಗಳು ತಕ್ಷಣ ಚಿಲ್ಲೆಂದು ಚಿಮ್ಮತೊಡಗುತ್ತವೆ; ಈ ಲೆಕ್ಕದಲ್ಲಿ ಇದು Hindustan Spring. ಮತ್ತೂ ಇದರ ಮೇಲೆ ಕಡಿವಾಣ ಯಾವ ಪಕ್ಷ ಹಾಗೂ ಸಂಘಟನೆಗಳಿಗೂ ಇಲ್ಲ. ಈ ಹೊತ್ತಿನಲ್ಲೇ, ಪ್ರಭುತ್ವವು ಅಪರಿಮಿತ ರೂಪದ ಹಿಂಸೆಯನ್ನು ಹರಿಯಬಿಡುತ್ತದೆ; UAPA, NSA, PSAಯಂತಹ ಕರಾಳ ಕಾನೂನುಗಳನ್ನು ಸಹಜವೆನ್ನುವ ಹಾಗೆ ಹರಿಯ ಬಿಡುತ್ತದೆ; ಕಾಶ್ಮೀರಕ್ಕೆ ಕಾಶ್ಮೀರವೇ ಬಯಲು ಸೆರೆಮನೆಯಾಗುತ್ತದೆ; ಭಿನ್ನಮತೀಯ ವಿದೇಶಿಯರನ್ನು ದೇಶಕ್ಕೆ ಕಾಲಿಡದಂತೆ ತಡೆಯಲಾಗುತ್ತದೆ; ತನ್ನ ಅಧಿಕಾರವನ್ನು ಪೊಲೀಸ್ ದುಂಡಾವರ್ತನೆಯ ಮೂಲಕ ನಿಯಂತ್ರಿಸಲು ಪ್ರಭುತ್ವ ಹೇಸುವುದಿಲ್ಲ; ಆದರೂ, ಜನ ಸುಮ್ಮನಾಗುವುದಿಲ್ಲ; ಪ್ರತಿಭಟನೆ, ಸ್ವಯಂ ಸ್ಫೂರ್ತಿಯಲ್ಲಿ ಹಿಗ್ಗುತ್ತಾ ಹೋಗುತ್ತದೆ; ಕಳೆದ ಮೂರು ದಶಕಗಳಲ್ಲಿ ಫ್ಯಾಶಿಸ್ಟ್ ಹಿಂದುತ್ವ ರಾಜಕಾರಣದ ಆಸ್ತಿಯಾಗಿದ್ದ ಸಾರ್ವಜನಿಕ ಸ್ಥಳಗಳು, ಒಮ್ಮೆಲೇ ಹಲವು ನಮೂನೆಯ ಅಧಿಕಾರ ವಿರೋಧಿಗಳಿಂದ ಗಿಜಿಗುಡತೊಡಗುತ್ತವೆ; ಇದೆಲ್ಲಾ ಎರಡೇ ತಿಂಗಳಲ್ಲಿ- ಯಾರು, ಎಲ್ಲಿಂದ, ಯಾಕೆ, ಹೇಗೆ, ಬಂದಿದ್ದಾರೆ ಎಂಬ ಸಂಘಟಿತ ದಾಖಲೆ ಪುಸ್ತಕವನ್ನು ಯಾವ ಸಂಘಟನೆಯೂ ಇಟ್ಟುಕೊಳ್ಳಲಾಗದ ಧಾವಂತದಲ್ಲಿ; ಮೂವತ್ತು ವರ್ಷಗಳ ನಂತರ ಪ್ರಜಾಪ್ರಭುತ್ವ ಪ್ರತಿರೋಧದ ಬಹುದೊಡ್ಡ ಜಾತ್ರೆಯು ವಿವಿಧ ರಂಗುಗಳಲ್ಲಿ ಹೊಮ್ಮುತ್ತದೆ;

ಈ ಅದಮ್ಯ ಚೈತನ್ಯಕ್ಕೆ ಪ್ರತಿನಿಧಿಯಾಗಿ ಹೊಮ್ಮುವುದು, ನಿರಾಕಾರಿಯಾದ, ನಿರ್ಜೀವಿಯಾಗಿದೆ ಎಂದುಕೊಂಡಿದ್ದ ಸಂವಿಧಾನ! ಅದರ ಓದು ಹೋರಾಟದ ಪ್ರಾರ್ಥನೆಯಾಗುತ್ತದೆ; ಪ್ರಭುತ್ವವು ಒತ್ತಾಯದಲ್ಲಿ ಹಾಡಲೇ ಬೇಕು ಎಂದು ಒತ್ತಾಯಿಸಿದಾಗ, ಧಿಕ್ಕಾರ ಎದುರಿಸಿದ್ದ, ರಾಷ್ಟ್ರಗೀತೆಯನ್ನು ಜನ, ರಾತ್ರೋರಾತ್ರಿ ಹೋರಾಟದ ವಿವಿಧ ಎಳೆಗಳನ್ನು ಹೆಣೆಯುವ ಮಾಯ ರಾಟಿಯಾಗಿಸಿಕೊಂಡುಬಿಡುತ್ತಾರೆ. ಮಹಾತ್ಮಾ ಬೊಚ್ಚುಬಾಯಿಯ ಅಧಿಕಾರದ ವರಸೆಗೆ ಈಡಾಗಿದ್ದಾನೆ ಎನಿಸುತ್ತಿದ್ದಾಗಲೇ, ಅಧಿಕಾರಸ್ಥರು ಆತನ ಹತ್ಯೆಯನ್ನು ಸಮರ್ಥಿಸುತ್ತಾ, ಆತನನ್ನು ಅಧಿಕಾರ ವಿರೋಧಿಗಳಿಗೆ ಒಪ್ಪಿಸುತ್ತಾರೆ; ದಲಿತರ ವಿಮೋಚಕರಾಗಿದ್ದ ಅಂಬೇಡ್ಕರ್, ನವಭಾರತದ ನಾಡಿ ಮಿಡಿತವಾಗಿಬಿಡುತ್ತಾರೆ; ಚಳವಳಿಯ ಈ ರಭಸವನ್ನು ಹೇಗೆ ಅಳಿಯುವುದು ಎಂದುಕೊಳ್ಳುತ್ತಿದ್ದ ಹಾಗೆ ದಿಲ್ಲಿ ನಗರಾಡಳಿತ ಪ್ರದೇಶದ ಜನ, ಅಧಿಕಾರಸ್ಥರ ತೊಡೆಗೂಸುಗಳಾದ ಮಾಧ್ಯಮದ ಮಂದಿಗೆ ನುಂಗಲಾಗದ ತುತ್ತಾಗುತ್ತಾರೆ.

ಇದೆಲ್ಲ ಚೇತನವೂ ಒಬ್ಬ ವ್ಯಕ್ತಿ, ಒಂದು ವಿಚಾರ, ಒಂದು ಪಂಥ, ಒಂದು ಪಕ್ಷಗಳ ನಿಯಂತ್ರಣಕ್ಕೆ ಸಿಕ್ಕದ ಪ್ರವಾಹವಾಗಿ ಹರಿಯುತ್ತಿದೆ.

ಇಂತಹ ಹೊತ್ತಲ್ಲಿ, ಆ ಪ್ರವಾಹದಲ್ಲಿ ತೇಲುತ್ತಿರುವ ಆ ಹುಡುಗಿಯ ವರ್ತನೆಯನ್ನು ನಾವು ಹಳೆಯ ಮಾನದಂಡಗಳಲ್ಲಿ ಅಳಿಯುತ್ತಿದ್ದೇವೆ! ನಾವು ಬಯಸಿದರೂ ಆಕೆ ನಮ್ಮ ಅಂಕೆಯಲ್ಲಿ ಇರುತ್ತಿರಲಿಲ್ಲ! ನಮ್ಮ ಅಂಕೆಗೆ ಒಳಗಾದರೆ ಆಕೆ ಆಕೆಯಾಗಿ ಇರುವುದಿಲ್ಲ. ಆಕೆ ಫೆಬ್ರವರಿ 16ನೇ ತಾರೀಕು ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟನ್ನು ಯಾರೂ ನೋಡಿರಲಿಲ್ಲವೆಂದು ಹೇಳಲಾಗದು. ಆ ಪೋಸ್ಟನ್ನು ನೋಡಿ ಎಷ್ಟು ಜನ ಆಕೆ ಹೇಳಿದ್ದು ತಪ್ಪು ಎಂದಿದ್ದಾರೆ? ಆ ಬರಹದ ಆಂತರ್ಯವನ್ನು ನಾನು ಮೆಚ್ಚುತ್ತೇನೆ- ಅಲ್ಲಿ ಆಕೆ ಸರಿಯಾಗಿಯೇ, ಗಡಿಮಿತಿಯ ರಾಷ್ಟ್ರೀಯವಾದವನ್ನು ಪ್ರಶ್ನಿಸಿದ್ದಾಳೆ-ರವೀಂದ್ರನಾಥ್ ಟಾಗೂರರ ಚಿಂತನೆಯದು ಎಂದು ಆಕೆಗೆ ಗೊತ್ತಿರಲಿಕ್ಕಿಲ್ಲ. ಇವತ್ತು ಆಕೆ, ಆ ಪೋಸ್ಟ್‌ನ ‘ಜಿಂದಾಬಾದ್’ ಸರಣಿಯನ್ನು ಅನುಸರಿಸಿ ಮಾತನಾಡುತ್ತಾ, ಈಗ ‘ಪಾಕಿಸ್ತಾನ ಜಿಂದಾಬಾದ್’ ಎಂದರೆ ಏನಾಗುತ್ತದೆ ಎಂದು ಕೇಳಿದ್ದರೆ, ನಾವೂ ಚಪ್ಪಾಳೆ ಹೊಡೆಯುತ್ತಿದ್ದೆವು. ಆದರೆ, ಆ ಹುಡುಗಿ ಲಯ ತಪ್ಪಿದ್ದರಿಂದ, ಇವತ್ತು ಅಧಿಕಾರಸ್ಥರು ಹಾಡನ್ನೇ ಹೊಸಕಿಹಾಕುತ್ತಾರೆ. ಲಯ ಆಕೆ ಹುಟ್ಟು ಹಾಕಿದ್ದಲ್ಲ ಎಂಬುದನ್ನು ಮರೆತು, ನಾವೂ ಆಕೆ ಸರಿಯಾಗಿ ಹಾಡಬೇಕೆನ್ನುತ್ತೇವೆ. ಲಯ ನಮಗೂ ದಕ್ಕಿಲ್ಲ, ನೆನಪಿರಲಿ.

ಇವತ್ತು ಸಾಗರದ ಹತ್ತಿರ ತಾಳಗುಪ್ಪದಲ್ಲಿ ಪೂರ್ಣಿಮಾ ಎನ್ನುವ ಹೆಂಗಸು, ಊರಲ್ಲಿ ಒಬ್ಬಳೇ ಪ್ರತಿಭಟಿಸುತ್ತಾ ಕೂತಿದ್ದಾಳೆ ಎಂದು ಕೇಳಿದೆ. ಆಕೆ ಗೌರಿ ಹತ್ಯೆಯಾದಾಗಲೂ ಹಾಗೇ ಮಾಡಿದ್ದಳು. ಆಕೆಯ ಸರ್ವತಂತ್ರ ಸ್ವತಂತ್ರ ವಿಲಕ್ಷಣ ಭಾವ ಯಾರಿಗೂ ಹಿಡಿಸುವಂತೆ ಕಾಣುತ್ತಿಲ್ಲ. ಅದು ಅವಳ ತಪ್ಪಾ? ಈ ಅಮೂಲ್ಯ ಎಂಬ ಹುಡುಗಿ ಆಡಬೇಕೆಂದಿದ್ದ ಸಾಲುಗಳನ್ನು ಆಡಲು ಬಿಟ್ಟಿದ್ದರೆ, ಅದೂ ಪೂರ್ಣಿಮಾಳ ದನಿಯ ಹಾಗೆ ನಮಗೆ ಅರ್ಥವಾಗುತ್ತಿತ್ತೋ ಇಲ್ಲವೋ!

ಅಮೂಲ್ಯ ತಪ್ಪು ಮಾಡಿದ್ದಾಳೆ ಎಂದು ಆರೋಪಿಸುವವರು, ಚಳವಳಿಯನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ; ಹಾಗಾಗಿ ಚಳವಳಿಯಲ್ಲಿರುವ ನಾವೆಲ್ಲಾ ಆ ಆರೋಪಕ್ಕೆ ಅರ್ಹರೇ! ಈ ಚಳವಳಿಯ ಶಕ್ತಿಯ ಅರಿವು ನಮಗಿನ್ನೂ ಆದಂತಿಲ್ಲ. ಈ ವಿಷಯದಲ್ಲಿ ಆಕೆಯ ಮಾತನ್ನು ಕೇಳುವ ಮುಂಚೆಯೇ ನಾವು ಕೇವಿಯಟ್ ಹಾಕುತ್ತಿದ್ದೇವೆ ಎನಿಸುತ್ತಿದೆ; ಸಿಕ್ಸ್ ಹೊಡೆಯುವ ತವಕದಲ್ಲಿ ಔಟಾದ ಬ್ಯಾಟ್ಸ್‌ಮನ್‌ರನ್ನು ಹಳಿಯುವಾಗ ಇರುವಷ್ಟು ಸೌಜನ್ಯವನ್ನೂ ತೋರದೆ, ಉಪದೇಶದ ದನಿಯಲ್ಲಿ ಮಾತಾಡುತ್ತಿದ್ದೇವೆ! ಸಾರ್ತ್ರ್ ‘‘ಹಿಟ್ಲರನ ಉದಯಕ್ಕೆ ನಾನೂ ಹೊಣೆ’’ ಎಂದ; ಅದರ ಅರ್ಥ ಆತನನ್ನು ಬೆಳೆಯಲು ಬಿಟ್ಟ ಸಮಾಜದಲ್ಲಿ ನಾನೂ ಒಬ್ಬನಾಗಿ, ಪಾಲು ನನ್ನದೂ ಇದೆ ಅನ್ನುವ ನೇರ ನಿಷ್ಠೂರ ಜವಾಬ್ದಾರಿ. ನಾನು, ಈ ಚಳವಳಿ ಪ್ರಭುತ್ವದ ಅನ್ಯಾಯದ ವಿರುದ್ಧ ಎಂಬ ನಂಬಿಕೆಯಲ್ಲಿ ಪಾಲ್ಗೊಂಡಿದ್ದೇನೆ; ಆ ಹುಡುಗಿಯೂ ಅದೇ ನಂಬಿಕೆಯಲ್ಲಿ ಪಾಲ್ಗೊಂಡಿದ್ದಾಳೆ; ಸಾರ್ತ್ರ್‌ನ ದನಿಯಲ್ಲಿ ಹೇಳಬೇಕೆಂದರೆ: ‘‘ಅಮೂಲ್ಯಳ ದುಡು ಕಿಗೆ ನಾನೂ ಹೊಣೆ’’. ಅಷ್ಟೇ.

Writer - ಕೆ. ಫಣಿರಾಜ್

contributor

Editor - ಕೆ. ಫಣಿರಾಜ್

contributor

Similar News