ಚುನಾವಣೆಯಲ್ಲಿ ಸ್ಪರ್ಧಿಸಿ: ಆರೆಸ್ಸೆಸ್ ಮುಖ್ಯಸ್ಥರಿಗೆ ಚಂದ್ರಶೇಖರ್ ಆಝಾದ್ ಸವಾಲು

Update: 2020-02-23 10:29 GMT

ನಾಗ್ಪುರ,ಫೆ.23:  ಸಂಘದ ಮನುವಾದ ಕಾರ್ಯಸೂಚಿಗೆ ಜನತೆಯ ಬೆಂಬಲವಿದೆಯೇ ಎಂದು ಪರೀಕ್ಷಿಸಲು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಝಾದ್ ಸವಾಲೆಸೆದಿದ್ದಾರೆ.

ನಾಗ್ಪುರದ ರೆಶಿಂಬಾಗ್‌ನಲ್ಲಿ ಭೀಮ್ ಆರ್ಮಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಆಝಾದ್, ‘‘ಹೊಸ ಪೌರತ್ವ ಕಾನೂನು(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್)ಎಲ್ಲವೂ ಆರೆಸ್ಸೆಸ್ನ ಕಾರ್ಯಸೂಚಿಯಾಗಿದೆ. ನಾನು ಆರೆಸ್ಸೆಸ್ ಮುಖ್ಯಸ್ಥರಿಗೆ ಸಲಹೆ ನೀಡಲು ಬಯಸುವೆ...ನೀವು ಸುಳ್ಳಿನ ಮುಸುಕನ್ನು ತೆಗೆದು ಮೈದಾನಕ್ಕೆ ಬನ್ನಿ...ಇದು ಪ್ರಜಾಪ್ರಭುತ್ವ..ನಿಮ್ಮ ಕಾರ್ಯಸೂಚಿಯೊಂದಿಗೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ. ಮನುಸ್ಮತಿ ಅಥವಾ ಸಂವಿಧಾನ ದೇಶವನ್ನು ನಡೆಸುತ್ತದೆ ಎನ್ನುವುದನ್ನು ಜನರು ನಿಮಗೆ ಹೇಳುತ್ತಾರೆ. ನಮಗೆ ಸಂವಿಧಾನದ ಮೇಲೆ ನಂಬಿಕೆ ಇದೆ. ಅವರು ಮನುಸ್ಮತಿಯನ್ನು ನಂಬುತ್ತಾರೆ. ಈ ದೇಶ ಸಂವಿಧಾನದಿಂದ ನಡೆಯುತ್ತಿದೆಯೇ ಹೊರತು ಬೇರ್ಯಾವ ಸಿದ್ದಾಂತದಿಂದ ಅಲ್ಲ’’ ಎಂದರು.

ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಭೀಮ್ ಆರ್ಮಿ ಮುಖ್ಯಸ್ಥ ಆಝಾದ್‌ಗೆ ಕೆಲವು ನಿರ್ದಿಷ್ಟ ಷರತ್ತುಗಳೊಂದಿಗೆ ತನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಿತ್ತು. ಕಾನೂನು ಹಾಗೂ ಸುವ್ಯವಸ್ಥೆಯ ಭೀತಿ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಆಝಾದ್‌ಗೆ ರ್ಯಾಲಿ ನಡೆಸಲು ಅನುಮತಿ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News