ಕಾಂಗ್ರೆಸ್ ಮುಖ್ಯಸ್ಥ ಹುದ್ದೆಗೆ ರಾಹುಲ್ ನಿರಾಕರಿಸಿದರೆ ಪರ್ಯಾಯ ಹುಡುಕುವುದು ಅನಿವಾರ್ಯ: ಶಶಿ ತರೂರ್

Update: 2020-02-23 12:40 GMT

ಹೊಸದಿಲ್ಲಿ: ಕಾಂಗ್ರೆಸ್ ಗೊತ್ತು ಗುರಿ ಇಲ್ಲದ ಪಕ್ಷ ಎಂಬ ಭಾವನೆ ಜನರಲ್ಲಿ ಮೂಡುವ ಮುನ್ನ ಪಕ್ಷ ಆದ್ಯತೆ ಮೇರೆಗೆ ತನ್ನ ನಾಯಕತ್ವ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳುವುದು ಅನಿವಾರ್ಯ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಪ್ರತಿಪಾದಿಸಿದ್ದಾರೆ.

ಪಕ್ಷದ ಪುನಶ್ಚೇತನದ ದೃಷ್ಟಿಯಿಂದ ಧೀರ್ಘಾವಧಿಯಿಂದ ಇರುವ ನಾಯಕತ್ವ ಬಗೆಗಿನ ಅನಿಶ್ಚಿತತೆಯನ್ನು ಬಗೆಹರಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಮುಖ್ಯಸ್ಥ ಹುದ್ದೆಗೆ ಬರಲು ರಾಹುಲ್ ಗಾಂಧಿ ಬಯಸುವುದಾದರೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅಗತ್ಯ. ಆದರೆ ತಮ್ಮ ಹಳೆಯ ನಿಲುವಿಗೆ ಬದ್ಧರಾಗುವುದಾದರೆ, ಪಕ್ಷ ಸಕ್ರಿಯ ಹಾಗೂ ಪೂರ್ಣಾವಧಿ ನಾಯಕತ್ವವನ್ನು ಹುಡುಕುವುದು ಅಗತ್ಯ. ಆಗ ಮಾತ್ರ ದೇಶದ ನಿರೀಕ್ಷೆಯಂತೆ ಪಕ್ಷ ಮುಂದಕ್ಕೆ ಸಾಗಲು ಅನುಕೂಲವಾಗುತ್ತದೆ ಎಂದು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು.

ಪಕ್ಷದ ಸಂಘಟನಾತ್ಮಕ ಸವಾಲುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಕ್ರಿಯ ನಾಯಕತ್ವದ ಜತೆಗೆ ಪಕ್ಷದ ಅತ್ಯುನ್ನತ ಕಾರ್ಯಕಾರಿಣಿಗೆ ಚುನಾವಣೆ ನಡೆಸಿ ಸೂಕ್ತರಾದವರನ್ನು ಆಯ್ಕೆ ಮಾಡುವುದೂ ಅಗತ್ಯ ಎಂದು ಅಭಿಪ್ರಾಯಪಟ್ಟರು. ಬಿಜೆಪಿಯ ವಿಭಜನಕಾರಿ ನೀತಿಗಳಿಗೆ ವಿರುದ್ಧವಾಗಿ ಪರ್ಯಾಯ ಅನಿವಾರ್ಯ. ಗಾಂಧಿ ಕುಟುಂಬದವರೇ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟ ಅವರು, ರಾಹುಲ್‍ಗಾಂಧಿ ಒಪ್ಪದಿದ್ದರೆ ಸಹಜವಾಗಿಯೇ ಆಯ್ಕೆ ಪ್ರಿಯಾಂಕಾ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News