ಜವಾಹರ್‌ಲಾಲ್ ನೆಹರೂ ನವ ಭಾರತದ ಶಿಲ್ಪಿ: ಡಾ.ಮನಮೋಹನ್‌ ಸಿಂಗ್

Update: 2020-02-23 14:42 GMT

ಹೊಸದಿಲ್ಲಿ, ಫೆ.23: ವಿಶ್ವ ವೇದಿಕೆಗಳಲ್ಲಿ ಭಾರತವು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿಂತಿರುವುದರ ಹಿಂದೆ ಮತ್ತು ಜಗತ್ತಿನ ಪ್ರಮುಖ ಶಕ್ತಿಯಾಗಿ ಕಾಣುತ್ತಿರುವುದರ ಹಿಂದೆ ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಪರಿಶ್ರಮವಿದೆ. ಅವರು ನವ ಭಾರತದ ಶಿಲ್ಪಿ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಹೊಸದಿಲ್ಲಿಯ ವರ್ಧಮಾನ್ ರಸ್ತೆಯಲ್ಲಿನ ಇಂಡಿಯಾ ಹ್ಯಾಬೀಟಾಟ್ ಸೆಂಟರ್‌ನ ಗುಲ್‌ಮೋಹರ್ ಸಭಾಗೃಹದಲ್ಲಿ ದೆಹಲಿ ಕರ್ನಾಟಕ ಸಂಘ ಸಹಯೋಗದೊಂದಿಗೆ ಬೆಂಗಳೂರಿನ ಸಪ್ನ ಬುಕ್ ಹೌಸ್ ಸ್ಪೀಕಿಂಗ್ ಟೈಗರ್ ಪ್ರಕಟಿಸಿದ ‘ಯಾರು ಭಾರತ ಮಾತೆ?’ ಕನ್ನಡ ಅನುವಾದಿತ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದೇಶ ಆಗಷ್ಟೇ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದ್ದ ಕಾಲದಲ್ಲಿ, ಅತ್ಯಂತ ಕಷ್ಟದ ದಿನಗಳಲ್ಲಿ, ಇನ್ನಷ್ಟೇ ದೇಶ ನಿರ್ಮಾಣವಾಗಬೇಕಿದ್ದ ಕಾಲಘಟ್ಟದಲ್ಲಿ ನೆಹರೂ ವಿಭಿನ್ನ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನಗಳೊಂದಿಗೆ ಈ ದೇಶವನ್ನು ಮುನ್ನಡೆಸಿದ್ದಾರೆ ಎಂದು ಮನಮೋಹನ್ ಸಿಂಗ್ ತಿಳಿಸಿದರು.

ನೆಹರೂ ಈ ದೇಶವನ್ನು ಸಾಮರಸ್ಯ ಮತ್ತು ಏಕತೆಯ ಉದ್ದೇಶಗಳೊಂದಿಗೆ ಕಟ್ಟಿದ್ದಾರೆ. ನವ ಭಾರತದ ನಿರ್ಮಾಣಕ್ಕಾಗಿ ನೆಹರೂ ಹಲವು ವಿಶ್ವವಿದ್ಯಾಲಯಗಳಿಗೆ, ಅಕಾಡೆಮಿಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ಆದರೆ, ಅವರು ನಿರೀಕ್ಷಿಸಿದ ದೇಶವಾಗಿ ಇಂದು ಭಾರತವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇವತ್ತಿನ ಸಮಾಜದ ಕೆಲ ವರ್ಗದ ಜನ ಭಾರತದ ಇತಿಹಾಸ ತಿಳಿದುಕೊಳ್ಳದೇ, ಪೂರ್ವಾಗ್ರಹಪೀಡಿತರಾಗಿ, ನೆಹರೂ ಅವರನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ ನನಗೆ ವಿಶ್ವಾಸವಿದೆ, ಇತಿಹಾಸಕ್ಕೆ ಸುಳ್ಳುಗಳನ್ನು ನಿರಾಕರಿಸಿ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಬಿಂಬಿಸುವ ಶಕ್ತಿ ಇದೆ ಎಂದು ಮನಮೋಹನ್ ಸಿಂಗ್ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಕರ್ನಾಟಕ ಕ್ಯಾಥೋಲಿಕ್ ಫೆಡರೇಷನ್‌ನ ಅಧ್ಯಕ್ಷ ರೊನಾಲ್ಡ್ ಕೊಲಾಸೋ, ಭಾರತೀಯ ತೇರಾಪಂಥಿ ಜೈನ ಯುವ ಸಂಘದ ಅಧ್ಯಕ್ಷ ವಿಮಲ್ ಕರಾರಿಯಾ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ.ವೆಂಕಟಾಚಲ ಹೆಗಡೆ, ದೆಹಲಿ ಕನ್ನಡ ವಿದ್ಯಾಸಂಸ್ಥೆಯ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಲೇಖಕ ಪ್ರೊ.ಕೆ.ಇ.ರಾಧಾಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಾಗರಿಕರ ಹೊರತಾದ ಯುದ್ಧೋನ್ಮಾದದ ಮತ್ತು ಅಪ್ಪಟ ಭಾವನಾತ್ಮಕ ಕಲ್ಪನೆಯ ದೇಶ ನಿರ್ಮಿಸುವ ಸಲುವಾಗಿ ರಾಷ್ಟ್ರವಾದ ಮತ್ತು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಸದ್ಯ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

-ಡಾ.ಮನಮೋಹನ್ ಸಿಂಗ್, ಮಾಜಿ ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News