ದಿಲ್ಲಿಯಲ್ಲಿ ಸಿಎಎ ವಿರೋಧಿಗಳು-ಬೆಂಬಲಿಗರ ನಡುವೆ ಘರ್ಷಣೆ

Update: 2020-02-23 18:23 GMT
Photo: Twitter(@ndtv)

ಹೊಸದಿಲ್ಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರೋಧಿ ಹೋರಾಟಗಾರರ ನಡುವೆ ಈಶಾನ್ಯ ದೆಹಲಿಯಲ್ಲಿ ರವಿವಾರ ಮಧ್ಯಾಹ್ನ ಘರ್ಷಣೆ ನಡೆದಿದೆ. ಪೌರತ್ವ ಕಾಯ್ದೆ ವಿರುದ್ಧ ಶನಿವಾರ ರಾತ್ರಿಯಿಂದ ಜಾಫರಾಬಾದ್‍ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಆ ಪ್ರದೇಶಕ್ಕೆ ಸಮೀಪದ ಮೌಜ್‍ ಪುರದಲ್ಲಿ ಘರ್ಷಣೆ ನಡದಿದೆ.

ಸ್ಥಳೀಯ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು ರವಿವಾರ ಮಧ್ಯಾಹ್ನ ಸಿಎಎ ಪರ ರ್ಯಾಲಿ ನಡೆಸಲು ನಿರ್ಧರಿಸಿದ್ದು ಸಮಸ್ಯೆಗೆ ಮೂಲವಾಯಿತು, ಪ್ರತಿಭಟನಾಕಾರರನ್ನು ಚದುರಿಸಲು ಸಾಧ್ಯವಾಗಿಲ್ಲವಾದರೂ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ರಸ್ತೆಯ ಇಕ್ಕೆಲಗಳಲ್ಲಿ ಪೊಲೀಸ್ ಬ್ಯಾರಿಕೇಡ್ ಬಳಿ ನಿಂತ ಎರಡೂ ಬಣದವರು ಪರಸ್ಪರ ಕಲ್ಲು ತೂರಾಟ ನಡೆಸಿದ ದೃಶ್ಯಾವಳಿಗಳು ಟಿವಿ ಚಾನಲ್‍ ಗಳಲ್ಲಿ ಪ್ರಸಾರವಾಗುತ್ತಿವೆ. ಅರೆ ಮಿಲಿಟರಿ ಪಡೆ ಸಿಬ್ಬಂದಿ ಜತೆಗೆ ದೊಡ್ಡ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಸಿಡಿಸಿದರು.

ಸಿಎಎ ವಿರೋಧಿ ಹೋರಾಟದಲ್ಲಿ ದೊಡ್ಡ ಸಂಖ್ಯೆಯ ಮಹಿಳೆಯರು ಸೇರಿದ್ದರಿಂದ ಪೊಲೀಸರು ಬಲ ಪ್ರಯೋಗ ನಡೆಸಲಿಲ್ಲ ಎನ್ನಲಾಗಿದೆ.

ಸಿಎಎ ರದ್ದತಿಗೆ ಆಗ್ರಹಿಸಿ ಜಾಫರಾಬಾದ್‍ ನಲ್ಲಿ ಶನಿವಾರ ರಾತ್ರಿಯಿಂದ 200ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರಧ್ವಜಗಳನ್ನು ಹಿಡಿದು ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತಿದ್ದಾರೆ. ರವಿವಾರ ಬೆಳಿಗ್ಗೆ ಮಹಿಳೆಯರು ಮತ್ತು ಮಕ್ಕಳು ಸೇರಿದ್ದರಿಂದ ಪ್ರತಿಭಟನಾ ನಿರತರ ಸಂಖ್ಯೆ ಬೆಳೆದಿದೆ. ಪ್ರತಿಭಟನೆಯಿಂದಾಗಿ ಮೆಟ್ರೊ ನಿಲ್ದಾಣವನ್ನು ರವಿವಾರ ಮುಚ್ಚಬೇಕಾಯಿತು.

ಈ ಮಧ್ಯೆ ಮೋದಿಯನ್ನು ಸೋಲಿಸಲಾಗದ ವಿರೋಧ ಪಕ್ಷಗಳು ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿವೆ. ಕಾನೂನು ಸಂಸತ್ತಿನಲ್ಲಿ ಆಂಗೀಕಾರವಾಗಿದೆ. ಇದರ ವಿರುದ್ಧದ ಪ್ರತಿಭಟನೆಗಳು ತಪ್ಪು ಎಂದು ಬಿಜೆಪಿ ಮುಖಂಡ ವಿಜಯ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಶಾಹೀನ್‌ಬಾಗ್‌ನಲ್ಲಿ ಮಹಿಳೆಯರ ಪ್ರತಿಭಟನೆಯಿಂದ ಪ್ರೇರಣೆ ಹೊಂದಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಜಫರ್‌ಬಾದ್ ಕೂಡ ಒಂದು. ಶಾಹೀನ್‌ಬಾಗ್‌ನಲ್ಲಿ ಕಳೆದ ಎರಡು ತಿಂಗಳಿಂದ ಸಾವಿರಾರು ಮಹಿಳೆಯರು, ವೃದ್ಧರು ಹಾಗೂ ಯುವ ಜನತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಆಗ್ನೇಯ ದಿಲ್ಲಿ ಹಾಗೂ ನೋಯ್ಡಾವನ್ನು ಸಂಪರ್ಕಿಸುವ ರಸ್ತೆಗೆ ತಡೆ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News