ಶಾಹೀನ್‌ಬಾಗ್ ಕಡೆ ಮುಖ ಹಾಕದ ಕೇಜ್ರಿವಾಲ್ ಮತ್ತು ಅಮಾನತುಲ್ಲಾ: ಪ್ರತಿಭಟನಾಕಾರರ ಅಸಮಾಧಾನ

Update: 2020-02-23 13:31 GMT

ಹೊಸದಿಲ್ಲಿ, ಫೆ.23: ಅರವಿಂದ್ ಕೇಜ್ರಿವಾಲ್ ನೇತೃತ್ವದ ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರಕಾರವು ತಮ್ಮ ಬಗ್ಗೆ ಸಹಾನುಭೂತಿಯನ್ನು ತೋರಿಸುತ್ತಿಲ್ಲ ಎಂದು ಶಾಹೀನ್‌ಬಾಗ್ ಪ್ರತಿಭಟನಾಕಾರರು ಆಪಾದಿಸಿದ್ದಾರೆ. ಶಾಹೀನ್‌ಬಾಗ್‌ನ್ನು ಒಳಗೊಂಡಿರುವ ಓಖ್ಲಾ ವಿಧಾನಸಭಾ ಕ್ಷೇತ್ರದಿಂದ 71,000ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಬಳಿಕ ಆಪ್ ಶಾಸಕ ಅಮಾನತುಲ್ಲಾ ಖಾನ್ ಅವರೂ ತಮ್ಮನ್ನು ಭೇಟಿಯಾಗಿಲ್ಲ ಎಂದೂ ಅವರು ದೂರಿದ್ದಾರೆ ಎಂದು ‘theprint’ ವರದಿ ಮಾಡಿದೆ.

‘ನಾವು ಖಾನ್ ಅವರನ್ನು ಬೆಂಬಲಿಸಿ ಅವರಿಗೆ ಮತ ನೀಡಿ ಗೆಲ್ಲಿಸಿದ್ದೇವೆ. ಆದರೆ ಚುನಾವಣೆಗಳು ಮುಗಿದ ಬಳಿಕ ಅವರು ನಾಪತ್ತೆಯಾಗಿದ್ದಾರೆ. ನಮಗೆ ಸ್ಥಳೀಯ ಶಾಸಕರ ಬೆಂಬಲದ ಅಗತ್ಯವಿದೆ’ ಎಂದು ಸಿಎಎ ವಿರುದ್ಧ ಶಾಹೀನ್‌ಬಾಗ್‌ನಲ್ಲಿ ಧರಣಿಯಲ್ಲಿ ಭಾಗವಹಿಸಿರುವ ಹಿರಿಯ ಮಹಿಳೆಯೋರ್ವರು ಹೇಳಿದರು. ಧರಣಿಯಲ್ಲಿ ಪಾಲ್ಗೊಂಡಿದ್ದ ಹಲವರೂ ಇದೇ ಆರೋಪವನ್ನು ಮಾಡಿದರು.

ಶಾಹಿನ್‌ಬಾಗ್ ಪ್ರತಿಭಟನೆ ಕಳೆದ 70 ದಿನಗಳಿಂದಲೂ ನಡೆಯುತ್ತಿದೆ. ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಕೇಜ್ರಿವಾಲ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಆದರೆ ಚುನಾವಣೆಯ ನಂತರವೂ ಅವರು ಶಾಹೀನ್‌ಬಾಗ್‌ಗೆ ಭೇಟಿ ನೀಡದಿರುವುದು ಪ್ರತಿಭಟನಾಕಾರರನ್ನು ನಿರಾಶೆಗೊಳಿಸಿದೆ.

‘ಚುನಾವಣೆಗೆ ಮುನ್ನ ಪ್ರಚಾರದ ಸಂದರ್ಭದಲ್ಲಿ ಮತ್ತು ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಮುನ್ನ ಕೇಜ್ರಿವಾಲ್ ನಮ್ಮನ್ನು ಭೇಟಿಯಾಗದ್ದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಆದರೆ ನಾವೀಗ ಅವರನ್ನು ಆಯ್ಕೆ ಮಾಡಿದ್ದೇವೆ. ಸ್ವಲ್ಪ ಸಮಯಾವಕಾಶ ಮಾಡಿಕೊಂಡು ನಮ್ಮನ್ನು ಭೇಟಿಯಾಗಲು ಅವರಿಗೆ ಸಾಧ್ಯವಿಲ್ಲವೇ? ನಮ್ಮನ್ನು ತೀರ ಕಡೆಗಣಿಸಲಾಗಿದೆ ಎಂದು ನಮಗೆ ಅನಿಸುತ್ತಿದೆ ’ಎಂದು ‘ಶಾಹೀನ್‌ಬಾಗ್ ಅಜ್ಜಿಯಂದಿರು’ ಎಂದೇ ಹೆಸರಾಗಿರುವ ಹಿರಿಯ ಮಹಿಳೆಯರ ಗುಂಪಿನ ಸದಸ್ಯೆ ಅಂಜುಂ ಖಾನ್ ಹೇಳಿದರು.

‘ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ನಮ್ಮ ಸಮಸ್ಯೆಗೆ ಪರಿಹಾರ ಹುಡುಕುವುದು ಅವರ ನೈತಿಕ ಕರ್ತವ್ಯವಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರಲ್ಲಿ ನಾವು ಭರವಸೆ ಕಳೆದುಕೊಂಡಿದ್ದೇವೆ. ಇದೀಗ ಕೇಜ್ರಿವಾಲ್ ಅವರು ಮಧ್ಯಪ್ರವೇಶಿಸಿ ಪರಿಹಾರವನ್ನು ಕಂಡುಕೊಳ್ಳಲು ಸಕಾಲವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಸಂಧಾನಕಾರರ ಬಗ್ಗೆ ಅಸಮಾಧಾನ:

ಪ್ರತಿಭಟನೆಯ ಸ್ಥಳವನ್ನು ಬದಲಿಸುವಂತೆ ತಮ್ಮ ಮನವೊಲಿಸಲು ಸರ್ವೋಚ್ಚ ನ್ಯಾಯಾಲಯದಿಂದ ನೇಮಕಗೊಂಡಿರುವ ಸಂಧಾನಕಾರರ ತಂಡದ ಬಗ್ಗೆಯೂ ಪ್ರತಿಭಟನಾಕಾರರು ನಿರಾಶೆಯನ್ನು ವ್ಯಕ್ತಪಡಿಸಿದರು. ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರುದ್ಧ ಪ್ರತಿಭಟನೆ ಈಗ ಸಂಚಾರ ತಡೆ ಮತ್ತು ಸಾರ್ವಜನಿಕ ಅನಾನುನೂಲದ ವಿಷಯವಾಗಿ ಬದಲಾಗಿದೆ ಎಂದ ಅವರು,‘ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಾಹೀನ್‌ಬಾಗ್ ಪ್ರಮುಖ ವಿಷಯಗಳಲ್ಲೊಂದಾಗಿತ್ತು, ಆದರೆ ಅದೀಗ ರಸ್ತೆ ತಡೆ ಸಮಸ್ಯೆಗೆ ಇಳಿಸಲ್ಪಟ್ಟಿದೆ. ಸಂಧಾನಕಾರರೂ ನಮ್ಮ ಬೇಡಿಕೆಗಳ ಬಗ್ಗೆ ಮಾತನಾಡಲು ಬಯಸುತ್ತಿಲ್ಲ. ಹೀಗಿರುವಾಗ ಅವರನ್ನು ನೇಮಕಗೊಳಿಸಿದ್ದು ಏಕೆ? ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಮಾತ್ರವೇ’ಎಂದು ಪ್ರಶ್ನಿಸಿದರು.

‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಿಎಎ ವಿರೋಧಿ ಪ್ರತಿಭಟನಾಕಾರರ ಬೆನ್ನಿಗೆ ನಿಂತಿರುವಂತೆ ಕೇಜ್ರಿವಾಲ್ ಅವರೂ ನಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ನಾವು ಬಯಸಿದ್ದೇವೆ. ಆಪ್ ಸರಕಾರವು ಜನತೆಯ ಪರವಾಗಿರಬೇಕು ಹಾಗು ಕೇರಳ ಮತ್ತು ರಾಜಸ್ಥಾನಗಳಂತೆ ಸಿಎಎ ವಿರುದ್ಧ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಬೇಕು ಎಂದು ಹಿರಿಯ ಮಹಿಳೆ ಅಮೀರ್ ಜಹಾಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News