ಟ್ರಂಪ್ ಭೇಟಿಗಾಗಿ ಗೋಡೆ ನಿರ್ಮಾಣ ಟೀಕಿಸಲು ಕವಿಯಾದ ಶಶಿ ತರೂರ್

Update: 2020-02-23 14:36 GMT

ಹೊಸದಿಲ್ಲಿ, ಫೆ.23: ಸೋಮವಾರ ಅಹ್ಮದಾಬಾದ್‌ಗೆ ಭೇಟಿ ನೀಡಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಣ್ಣಿನಿಂದ ನಗರದ ಕೊಳಗೇರಿಯನ್ನು ಮರೆಮಾಚಲು ಗೋಡೆಯೊಂದರ ನಿರ್ಮಾಣವನ್ನು ಟೀಕಿಸಲು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ರವಿವಾರ ಕವಿಯಾಗಿ ಪರಿವರ್ತನೆಗೊಂಡಿದ್ದರು.

 ಟ್ರಂಪ್ ಅವರ ರೋಡ್ ಶೋ ನಡೆಯಲಿರುವ ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಮೊಟೆರಾ ಕ್ರೀಡಾಂಗಣದವರೆಗಿನ ರಸ್ತೆಯ ಪಕ್ಕದಲ್ಲಿರುವ ಸರನಿಯಾ ವಾಸ್ ಕೊಳಗೇರಿಯನ್ನು ಮರೆ ಮಾಡಲು ಅಹ್ಮದಾಬಾದ್ ಮಹಾನಗರ ಪಾಲಿಕೆಯು 600 ಮೀ.ಉದ್ದದ ಗೋಡೆಯನ್ನು ನಿರ್ಮಿಸಿದೆ. ಅಧಿಕಾರಿಗಳು ಮಾತ್ರ ಗೋಡೆ ನಿರ್ಮಾಣಕ್ಕೂ ಟ್ರಂಪ್ ಭೇಟಿಗೂ ಯಾವುದೇ ಸಂಬಂಧವಿಲ್ಲ ಎಂದು ಸಮರ್ಥಿಸಿ ಕೊಳ್ಳುತ್ತಿದ್ದಾರೆ.

‘ನ್ಯೂಯಾರ್ಕ್‌ಲ್ಲಿ ಟ್ರಂಪ್ ಅವರು ವಾಲ್ಡಾರ್ಫ್ ಅಸ್ಟೋರಿಯಾ (ಪ್ರಸಿದ್ಧ ಹೋಟೆಲ್)ದ ಎದುರಿನಿಂದ ಹಾದು ಹೋಗುತ್ತಿರುತ್ತಾರೆ. ಅಹ್ಮದಾಬಾದ್‌ನಲ್ಲಿ ಅವರು ವಾಲ್ಡ್-ಆಫ್ ಡಿಸ್ಟೋಪಿಯಾ(ಗೋಡೆ ಕಟ್ಟಿದ ನರಕಕೂಪ)ದ ಎದುರಿನಿಂದ ಸಾಗಲಿದ್ದಾರೆ ’ಎಂದು ತಿರುವನಂತಪುರ ಸಂಸದರೂ ಆಗಿರುವ ತರೂರ್ ಟ್ವೀಟಿಸಿದ್ದಾರೆ.

‘ಟ್ರಂಪ್ ವಾಲ್ ನಿರ್ಮಿಸುವ ಮೂಲಕ ಬಡತನ ಮತ್ತು ಶ್ರೀಮಂತಿಕೆಯ ನಡುವಿನ ಅಂತರವನ್ನು ಇಟ್ಟಿಗೆಗಳು ಮತ್ತು ಬಣ್ಣಗಳಿಂದ ಮುಚ್ಚಲಾಗಿದೆ ’ಎಂದು ಆರಂಭಿಸಿರುವ ತರೂರ್, ‘ಈ ಗೋಡೆಯಿಂದ ಇದು ಸ್ಪಷ್ಟವಾಗಿದೆ;ಅವರು ತೋರಿಕೆಯಲ್ಲಿ ನಿಸ್ಸೀಮರಾಗಿದ್ದಾರೆ;ಅವರು ಬಡತನದಿಂದ ಶ್ರೀಮಂತಿಕೆಯತ್ತ ಈ ಪಯಣವನ್ನು ಕೆಲವೇ ಘಳಿಗೆಗಳಲ್ಲಿ ಅಳೆಯುತ್ತಾರೆ;ಅವರು ಸತ್ಯವನ್ನು ಗೋಡೆಯಿಂದ ಮುಚ್ಚುತ್ತಾರೆ’ಎಂಬ ಸ್ವರಚಿತ ಪುಟ್ಟ ಹಿಂದಿ ಕವನವೊಂದನ್ನು ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News