ಆರೆಸ್ಸೆಸ್ ನಿಷೇಧಿಸಿದರೆ, ಮನುವಾದ ಅಂತ್ಯಗೊಳ್ಳುತ್ತದೆ: ಚಂದ್ರಶೇಖರ್ ಆಝಾದ್

Update: 2020-02-23 18:04 GMT

ನಾಗಪುರ, ಫೆ. 23: ಆರೆಸ್ಸೆಸ್ ಗೆ ‘ಮನುಸ್ಮತಿ’ ಮೇಲೆ ನಂಬಿಕೆ ಇದೆ. ಆರೆಸ್ಸೆಸ್ ಮೇಲೆ ನಿಷೇಧ ಹೇರಿದರೆ ಮಾತ್ರ ‘ಮನುವಾದ’ಕ್ಕೆ ಅಂತ್ಯ ಹಾಡಬಹುದು ಎಂದು ಭೀಮ್ ಆರ್ಮಿ ವರಿಷ್ಠ ಚಂದ್ರಶೇಖರ್ ಆಝಾದ್ ಶನಿವಾರ ಹೇಳಿದ್ದಾರೆ.

ರ‍್ಯಾಲಿಗೆ ನಾಗಪುರ ಪೊಲೀಸರು ಅನುಮತಿ ನಿರಾಕರಿಸಿದ ಬಳಿಕ, ಕಾರ್ಯಕರ್ತರ ಸಮಾವೇಶ ರಾಜಕೀಯ ಕಾರ್ಯಕ್ರಮವಾಗಿ ಬದಲಾಗಬಾರದು ಎಂಬ ಶರತ್ತಿನೊಂದಿಗೆ ಬಾಂಬೆ ಉಚ್ಚ ನ್ಯಾಯಾಲಯ ಅನುಮತಿ ನೀಡಿತ್ತು.

ನಾಗಪುರದ ಪೂರ್ವ ಭಾಗದಲ್ಲಿರುವ ಆರೆಸ್ಸೆಸ್ ನ ಕೇಂದ್ರ ಕಚೇರಿ ಸಮೀಪ ಇರುವ ರೇಶಿಮ್‌ಬಾಗ್ ಮೈದಾನದಲ್ಲಿ ಸಂಘಟನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಚಂದ್ರಶೇಖರ್ ಆಝಾದ್ ಮಾತನಾಡಿದರು.

ನಾನು ರ‍್ಯಾಲಿ ನಡೆಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನಾನು ಬಯಸಿದ ಯಾವುದೇ ಸ್ಥಳಕ್ಕೆ ಹೋಗಬಲ್ಲೆ. ನಾವು ಪ್ರಜಾಪ್ರಭುತ್ವ ದೇಶದಲ್ಲಿ ಜೀವಿಸುತ್ತಿದ್ದೇವೆ. ಬಿಜೆಪಿ ಆರೆಸ್ಸೆಸ್ ನಿಂದ ನಡೆಯುತ್ತಿದೆ. ಸಾಧ್ಯವಿದ್ದರೆ ಮೋಹನ್ ಭಾಗವತ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಿ. ಸಂವಿಧಾನ ಆಳ್ವಿಕೆ ನಡೆಸುತ್ತದೊ ಮನುಸ್ಮೃತಿ ಆಳ್ವಿಕೆ ನಡೆಸುತ್ತದೊ ಗೊತ್ತಾಗುತ್ತದೆ ಎಂದು ಅವರು ಹೇಳಿದರು.

ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವ ಉದ್ದೇಶವನ್ನು ಸಿಎಎ ಹಾಗೂ ಎನ್‌ಆರ್‌ಸಿ ಹೊಂದಿದೆ. ಸರಕಾರದ ಸ್ವೀಕಾರಾರ್ಹವಲ್ಲದ ನಿರ್ಧಾರಗಳ ವಿರುದ್ಧ ಪ್ರತಿಭಟನೆ ನಡೆಸುವ ಅವಕಾಶವನ್ನು ಸಂವಿಧಾನದ ಕಲಂ 19 ನಮಗೆ ನೀಡುತ್ತದೆ ಎಂದು ಅವರು ತಿಳಿಸಿದರು. ಆರೆಸ್ಸೆಸ್ ಮೀಸಲಾತಿಗೆ ಹಿಂದಿನ ಬಾಗಿಲಿನ ಮೂಲಕ ಅಂತ್ಯ ಹಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ನೀವು ನಮ್ಮ ಮೇಲೆ ಗುಂಡು ಹಾರಿಸಿ, ಲಾಠಿ ಚಾರ್ಜ್ ಮಾಡಿ. ಆದರೆ, ನಾವು ಹೆದರುವುದಿಲ್ಲ. ಆದರೆ, ಸರಕಾರ ಬದಲಾಗಲಿದೆ ಎಂದು ನಾನು ಎಚ್ಚರಿಸುತ್ತೇನೆ. ಸರಕಾರ ಬದಲಾದ ಬಳಿಕ ಎಲ್ಲವನ್ನೂ ಲೆಕ್ಕ ಇರಿಸಿ ತೀರಿಸುತ್ತೇವೆ. ಮುಂದೆ ಬಹುಜನ ಸರಕಾರ ಅಧಿಕಾರಕ್ಕೆ ಬರುತ್ತದೆ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಚಂದ್ರಶೇಖರ್ ಆಝಾದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News