ಸೋಮವಾರ ‘ನಮಸ್ತೆ ಟ್ರಂಪ್’ಗಾಗಿ ಭಾರತ ಸಜ್ಜು

Update: 2020-02-23 16:42 GMT

ಹೊಸದಿಲ್ಲಿ, ಫೆ.23: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡು ದಿನಗಳ ಭಾರತ ಭೇಟಿ ಸೋಮವಾರದಿಂದ ಆರಂಭಗೊಳ್ಳಲಿದೆ. ಪತ್ನಿ ಮೆಲಾನಿಯಾ ಮತ್ತು ಉನ್ನತ ಮಟ್ಟದ ನಿಯೋಗದೊಂದಿಗೆ ಮಧ್ಯಾಹ್ನ ಅಹ್ಮದಾಬಾದ್‌ನ ಸರದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಟ್ರಂಪ್ ಅವರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರು ಸ್ವಾಗತಿಸುವ ನಿರೀಕ್ಷೆಯಿದೆ.

ಮೋದಿ ಮತ್ತು ಟ್ರಂಪ್ ವಿಮಾನ ನಿಲ್ದಾಣದಿಂದ ಮೊಟೆರಾ ಕ್ರೀಡಾಂಗಣದವರೆಗೆ ರೋಡ್ ಶೋ ನಡೆಸಲಿದ್ದು,ಈ ಸಂದರ್ಭ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಸೇರಿ ಅಮೆರಿಕದ ಅಧ್ಯಕ್ಷರನ್ನು ಸ್ವಾಗತಿಸಲಿದ್ದಾರೆ. ಮೊಟೆರಾದಲ್ಲಿ ಪುನರ್‌ನಿರ್ಮಾಣಗೊಂಡಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅನ್ನು ಉದ್ಘಾಟಿಸುವ ಟ್ರಂಪ್ ಬಳಿಕ ತನಗಾಗಿ ಏರ್ಪಡಿಸಲಾಗಿರುವ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು,ಸುಮಾರು ಒಂದು ಲಕ್ಷ ಜನರು ಸೇರುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಸಾಬರಮತಿಯ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ಟ್ರಂಪ್ ಮಧ್ಯಾಹ್ನ ಆಗ್ರಾಕ್ಕೆ ತೆರಳಿ ವಿಶ್ವವಿಖ್ಯಾತ ತಾಝ್‌ಮಹಲ್ ಅನ್ನು ವೀಕ್ಷಿಸಲಿದ್ದಾರೆ. ಸಂಜೆ ದಿಲ್ಲಿಗೆ ನಿರ್ಗಮಿಸಲಿದ್ದಾರೆ. ಮಂಗಳವಾರ ಬೆಳಿಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದ ಅಂಗಳಲ್ಲಿ ಸಾಂಪ್ರದಾಯಿಕ ಸ್ವಾಗತವನ್ನು ಸ್ವೀಕರಿಸಲಿರುವ ಟ್ರಂಪ್ ದಂಪತಿ ಬಳಿಕ ರಾಜಘಾಟ್‌ಗೆ ತೆರಳಿ ರಾಷ್ಟ್ಟ್ರಪಿತ ಮಹಾತ್ಮಾ ಗಾಂಧಿಯವರಿಗೆ ಗೌರವಾರ್ಪಣೆ ಮಾಡಲಿದ್ದಾರೆ.

ಹೈದರಾಬಾದ್ ಭವನದಲ್ಲಿ ಮೋದಿ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆಗಳ ಬಳಿಕ ಪ್ರಧಾನಿಯವರು ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳುವ ಟ್ರಂಪ್ ಮಧ್ಯಾಹ್ನ ಅಮೆರಿಕದ ರಾಯಭಾರಿ ಕಚೇರಿಯಲ್ಲಿ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಸಂಜೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾದ ಬಳಿಕ ರಾತ್ರಿ ಸ್ವದೇಶಕ್ಕೆ ನಿರ್ಗಮಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News