ಸಿಎಎ ಬಗ್ಗೆ ಆತಂಕ ಬೇಡ ಎಂದು ಜನರಲ್ಲಿ ಹೇಳುವುದು ಅತಾರ್ಕಿಕ: ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

Update: 2020-02-23 17:05 GMT

ಮುಂಬೈ, ಫೆ. 23: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಭೀತಿ ಬೇಡ ಎಂದು ಜನರಲ್ಲಿ ಹೇಳುವುದು ಅತಾರ್ಕಿಕವಾಗಿದೆ. ಯಾಕೆಂದರೆ, ಭೀತಿ ಸೃಷ್ಟಿಸಿರುವುದೇ ಸರಕಾರ ಎಂದು ಬಾಂಬೆ ಉಚ್ಚ ನ್ಯಾಯಾಲಯದ ನಿರ್ಗಮನ ಮುಖ್ಯ ನ್ಯಾಯಮೂರ್ತಿ ಪ್ರದೀಪ್ ನಂದ್ರಜೋಗ್ ಶನಿವಾರ ಹೇಳಿದ್ದಾರೆ.

ನ್ಯಾಯಮೂರ್ತಿಯಾಗಿ 18 ವರ್ಷಗಳ ಸೇವೆಯ ಬಳಿಕ ಫೆಬ್ರವರಿ 24ರಂದು ನಿವೃತ್ತರಾಗಲಿರುವ ಮುಖ್ಯ ನ್ಯಾಯಮೂರ್ತಿ ನಂದ್ರಜೋಗ್ ಅವರು ‘ದಿ ಫ್ರೀ ಪ್ರೆಸ್ ಜರ್ನಲ್’ (The Free Press Journal)ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ಅರ್ಧ ಹಾನಿಯಾಗಿದೆ. ಇದರಿಂದ ಮುಂದಿನ ಹಂತವಾದ ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ಜನರು ತಪ್ಪಿಸಿಕೊಳ್ಳುತ್ತಿದ್ದಾರೆ. ಸರಕಾರ ಜನರಿಗೆ ಉತ್ತರದಾಯಿಯಾಗಿರುವುದರಿಂದ ‘ಪಾರದರ್ಶಕ’ವಾಗಿರಬೇಕು ಎಂದು ಅವರು ಹೇಳಿದರು.

‘‘ಈ ವಿಷಯದ ಬಗ್ಗೆ ಸರಕಾರ ಪಾರದರ್ಶಕವಾಗಿರಬೇಕು. ಕಾಯ್ದೆಯ ನಿಯಮದೊಂದಿಗೆ ಬರಬೇಕು. ಅದನ್ನೆಲ್ಲ ಮಾಡದೆ ಸರಕಾರ ದೇಶಾದ್ಯಂತ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯನ್ನು ಪರಿಚಯಿಸುವ ಮೂಲಕ ಅರ್ಧದಷ್ಟು ಹಾನಿ ಉಂಟು ಮಾಡಿದೆ’’ ಎಂದು ಅವರು ಹೇಳಿದರು.

ರಾಷ್ಟ್ರೀಯ ಪೌರತ್ವ ನೋಂದಣಿಯ ನಿಯಮವನ್ನು ಸರಕಾರ ಪ್ರಕಟಿಸುವುದನ್ನು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ನಾಗರಿಕರು ಕಾಯುತ್ತಿರಬೇಕು. ಆದರೆ, ಇದೇ ಸಂದರ್ಭ ಅವರು ಭೀತರಾಗಿದ್ದಾರೆ. ಯಾಕೆಂದರೆ, ಅಸ್ಸಾಂನಲ್ಲಿ ನಡೆದಿರುವುದು ಪುನರಾವರ್ತನೆ ಆಗಬಹುದು ಎಂಬ ಕಾರಣಕ್ಕೆ. ಅಸ್ಸಾಂನಲ್ಲಿ ದೊಡ್ಡ ಸಂಖ್ಯೆ ಜನರು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿದ್ದಾರೆ. ಆದರೆ, ಆಧಾರ್, ಪಾನ್, ಚುನಾವಣಾ ಗುರುತುಚೀಟಿಯಂತಹ ದಾಖಲೆಗಳು ಪೌರತ್ವಕ್ಕೆ ಆಧಾರ ಅಲ್ಲ ಎಂದು ನ್ಯಾಯಾಲಯ ತಿಳಿಸಿದೆ ಎಂದು ನಂದರ್‌ಜೋಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News