ಕೊರೋನ ವೈರಸ್: ಡೈಮಂಡ್ ಪ್ರಿನ್ಸೆಸ್‌ ಹಡಗಿನಲ್ಲಿ ಇನ್ನೂ ನಾಲ್ವರು ಭಾರತೀಯರಿಗೆ ಸೋಂಕು

Update: 2020-02-23 17:27 GMT

ಟೋಕಿಯೊ, ಫೆ.23: ಕೊವಿಡ್ 19 (ಕೊರೋನ ವೈರಸ್) ಪೀಡಿತರಿರುವ ಹಿನ್ನೆಲೆಯಲ್ಲಿ ಜಪಾನ್‌ನ ಯೊಕೋಹಾಮ ಬಂದರಿನಲ್ಲಿ ದಿಗ್ಭಂಧನದಲ್ಲಿರಿಸಲಾಗಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ ಇನ್ನೂ ನಾಲ್ವರು ಭಾರತೀಯ ನಾವಿಕ ಸಿಬ್ಬಂದಿಗೆ, ಸೋಂಕುರೋಗ ತಗಲಿರುವುದು ವೈದ್ಯಕೀಯ ತಪಾಸಣೆಯಿಂದ ದೃಢಪಟ್ಟಿದೆ. ಇದರೊಂದಿಗೆ ಈ ಪ್ರವಾಸಿ ಹಡಗಿನಲ್ಲಿ ಕೊರೋನ ವೈರಸ್ ಪೀಡಿತರಾಗಿರುವ ಭಾರತೀಯರ ಸಂಖ್ಯೆ 12ಕ್ಕೇರಿದೆಯೆಂದು ಜಪಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಹೇಳಿಕೆ ತಿಳಿಸಿದೆ.

ದಿಗ್ಬಂಧನಕ್ಕೊಳಗಾಗಿರುವ ಹಡಗಿನಲ್ಲಿ ಇನ್ನೂ 1 ಸಾವಿರಕ್ಕೂ ಅಧಿಕ ಪ್ರಯಾಣಿಕರು ಹಾಗೂ ನಾವಿಕ ಸಿಬ್ಬಂದಿ ಉಳಿದುಕೊಂಡಿದ್ದಾರೆಂದು ಜಪಾನ್ ಸರಕಾರದ ಮುಖ್ಯ ಸಂಪುಟ ಕಾರ್ಯದರ್ಶಿ ಯೊಶಿದೆ ಸುಗಾ ತಿಳಿಸಿದ್ದಾರೆ. ಶನಿವಾರದಂದು ಹಡಗಿನಲ್ಲಿ ಸೋಂಕುಪೀಡಿತರ ಜೊತೆ ನಿಕಟವಾಗಿ ಸಂಪರ್ಕದಲ್ಲಿದ್ದ 100 ಮಂದಿಯನ್ನು ಹಡಗಿನಿಂದ ಹೊರಬರಲು ಅನುಮತಿ ನೀಡಲಾಗಿದೆ.

ಫೆಬ್ರವರಿ 3ರಂದು ಯೊಕೋಹಾಮ ಬಂದರಿನಲ್ಲಿ ಲಂಗರು ಹಾಕಿದ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿದ್ದ 3711 ಮಂದಿಯ ಪೈಕಿ ಆರು ಮಂದಿ ಪ್ರಯಾಣಿಕರು ಹಾಗೂ 132 ಮಂದಿ ನೌಕಾ ಸಿಬ್ಬಂದಿ ಸೇರಿದಂತೆ ಒಟ್ಟು 138 ಭಾರತೀಯರಿದ್ದರು.

ಹಾಂಕಾಂಗ್‌ನಿಂದ ಆಗಮಿಸಿದ್ದ ಈ ಹಡಗಿನಲ್ಲಿದ್ದ ಪ್ರಯಾಣಿಕನೊಬ್ಬನಿಗೆ ಕೊರೊನ ವೈರಸ್ ತಗಲಿರುವುದು ದೃಢಪಟ್ಟ ಬಳಿಕ ಆ ಹಡಗನ್ನು ದಿಗ್ಬಂಧನದಲ್ಲಿರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News