ದಕ್ಷಿಣ ಕನ್ನಡ ಜಿಲ್ಲೆಯನ್ನು ಆಹುತಿ ತೆಗೆದುಕೊಳ್ಳುತ್ತಿರುವ ಡ್ರಗ್ಸ್

Update: 2020-02-24 06:53 GMT

ವಾರ್ತಾಭಾರತಿ ವಿಶೇಷ ಸರಣಿ

ಡ್ರಗ್ಸ್ ಎಂಬ ಮಾಯಾ ಜಾಲದ ಕಬಂಧ ಬಾಹು ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಹೈರಾಣಾಗಿಸಿರುವುದು ಹಳೆಯ ಸುದ್ದಿ. ಕಾರ್ಕೋಟಕ ವಿಷಕ್ಕಿಂತಲೂ ಅಪಾಯಕಾರಿ ಎಂದು ಬಣ್ಣಿಸಲಾಗುವ ಈ ಡ್ರಗ್ಸ್ ಜಾಲವು ಅದೆಷ್ಟೋ ಹದಿಹರೆಯದವರ ಭವಿಷ್ಯವನ್ನು ನುಚ್ಚು ನೂರಾಗಿಸಿದೆ. ಕುಟುಂಬವನ್ನು ಹತಾಶೆ, ನೋವಿಗೆ ಸಿಲುಕಿಸಿದೆ. ದ.ಕ. ಜಿಲ್ಲೆಯಾದ್ಯಂತ ಸಾಕಷ್ಟು ಜಾಗೃತಿ, ಪೊಲೀಸ್ ಇಲಾಖೆಯಿಂದ ಈ ಡ್ರಗ್ಸ್ ಮಾಫಿಯಾದ ವಿರುದ್ಧದ ನಿಯಂತ್ರಣದ ಕ್ರಮಗಳ ಹೊರತಾಗಿಯೂ ಈ ಮಾಫಿಯಾ ಮಾತ್ರ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದೆ. ಪ್ರತಿನಿತ್ಯವೆಂಬಂತೆ ಪೊಲೀಸ್ ಇಲಾಖೆಯು ಡ್ರಗ್ಸ್ ಸೇವನೆ ಪತ್ತೆ, ಡ್ರಗ್ಸ್ ವಶ- ಆರೋಪಿಗಳ ಸೆರೆ ಎಂಬ ಪ್ರಕಟನೆಗಳನ್ನು ನೀಡುತ್ತಿರುವುದು ಈ ಜಾಲ ತನ್ನ ಜಾಲವನ್ನು ವಿಸ್ತರಿಸಿರುವುದಕ್ಕೆ ಸಾಕ್ಷಿ ಎಂಬಂತಿದೆ. ಈ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ ಡ್ರಗ್ಸ್ ಮಾಫಿಯಾ ವಿರುದ್ಧ ಜಾಗೃತಿ ಮೂಡಿಸುವ, ಈ ಮಾಫಿಯಾದ ಕರಾಳ ಮುಖವನ್ನು ಸಮಾಜದ ಮುಂದಿಟ್ಟು ಎಚ್ಚರಿಸುವ ಸರಣಿ ಬರಹಗಳನ್ನು ಆರಂಭಿಸಿದೆ.

ಮಂಗಳೂರು, ಫೆ.23: ಡ್ರಗ್ಸ್ ಹಾಗೂ ಇತರ ಮಾದಕ ವಸ್ತುಗಳ ಸೇವನೆ ಚಟಕ್ಕೆ ತುತ್ತಾಗಿ ಅದರಿಂದ ಹೊರಬರಲು ಮುಂದಾಗುವವರಿಗೆ ಸಮಾಲೋಚನೆ ಹಾಗೂ ಚಿಕಿತ್ಸೆಗೆ ಸಹಕರಿಸುವ ಮೂಲಕ ಕಳೆದ ಸುಮಾರು ಮೂರು ದಶಕಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ನಿರ್ದೇಶಕಿ ಹಾಗೂ ಡಿ ಎಡಿಕ್ಷನ್ ಸೆಂಟರ್‌ನ ಮುಖ್ಯಸ್ಥರಾದ ಹಿಲ್ಡಾ ರಾಯಪ್ಪನ್ ಡ್ರಗ್ಸ್ ಸೇರಿದಂತೆ ಮಾದಕ ವ್ಯಸನದ ಕರಾಳ ಮುಖವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಡ್ರಗ್ಸ್ ಎಂಬ ಮಾಯಾ ಜಾಲವನ್ನು ನಿಯಂತ್ರಿಸಲು ಸಾಮಾಜಿಕ ಆಂದೋಲನದ ಅಗತ್ಯವಿದೆ. ನಮ್ಮ ಆರೋಗ್ಯವನ್ನು ಹಾಳು ಮಾಡುವ ವೈರಸ್ (ಡೆಂಗ್, ಮಲೇರಿಯಾ, ಚಿಕುನ್ ಗುನ್ಯಾ, ಪ್ರಸ್ತುತ ಕೊರೋನ) ಕಾಯಿಲೆಗಳ ವಿರುದ್ಧ ಯಾವ ರೀತಿಯಲ್ಲಿ ಜನಜಾಗೃತಿಯನ್ನು ಮೂಡಿಸಲಾಗುತ್ತದೆಯೋ ಅದಕ್ಕಿಂತಲೂ ಬೃಹತ್ತಾದ ಸರ್ವ ಜನರೂ ಪಾಲ್ಗೊಳ್ಳುವ ಆಂದೋಲನ, ಅಭಿಯಾನ ಡ್ರಗ್ಸ್ ವಿರುದ್ಧ ನಡೆಯಬೇಕಾಗಿದೆ ಎಂಬುದು ಹಿಲ್ಡಾ ರಾಯಪ್ಪನ್ ಅವರ ಅಭಿಪ್ರಾಯ.

ಹಿಲ್ಡಾ ರಾಯಪ್ಪನ್ ಜತೆಗಿನ ಸಂದರ್ಶನ ಆಯ್ದ ಭಾಗ ಇಲ್ಲಿದೆ. 

►ನಿರಂತರ ಪ್ರಯತ್ನ, ಡ್ರಗ್ಸ್ ಮಾರಾಟಗಾರರ ಜಾಲ ಪತ್ತೆ ಹಚ್ಚುವ ಕಾರ್ಯದ ಹೊರತಾಗಿಯೂ ಈ ಡ್ರಗ್ಸ್ ಮಾಫಿಯಾವನ್ನು ನಿಯಂತ್ರಿ ಸಲು ಸಾಧ್ಯವಾಗುತ್ತಿಲ್ಲ ಏಕೆ?

-ಕೇವಲ ಜಾಗೃತಿ, ಮಾತುಗಳು ಹಾಗೂ ಕಾರ್ಯಕ್ರಮಗಳಿಂದ ಇಂತಹ ಪಿಡುಗನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬರೂ ಈ ಡ್ರಗ್ಸ್‌ನ ಅಪಾಯಗಳನ್ನು ಅರಿತು ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಅರಿವು ನೀಡುವ ಕೆಲಸ ಆಂದೋಲನ ರೂಪದಲ್ಲಿ ಆಗಬೇಕಾಗಿದೆ. ಮಾಧ್ಯಮಗಳಲ್ಲಿ ಇಷ್ಟು ಡ್ರಗ್ಸ್ ಪತ್ತೆಯಾಗಿದೆ. ಇಷ್ಟು ಜನ ಅಪರಾಧಿಗಳನ್ನು ಬಂಧಿಸಲಾ ಗಿದೆ ಎಂಬ ಮಾಹಿತಿಗಳು ಪೊಲೀಸ್ ಇಲಾಖೆಯಿಂದ ಪ್ರಕಟವಾಗುತ್ತವೆ. ಅದರಿಂದ ಹೊರತಾದ ಮಾಹಿತಿಗಳು ಇಲ್ಲ. ಇದಕ್ಕೆ ಸಮರ್ಪಕ ವ್ಯವಸ್ಥೆಯೊಂದಿಗೆ ಅಭಿಯಾನ ಆದಾಗ ಈ ಚಟಕ್ಕೆ ಖಂಡಿತಾ ನಿಯಂತ್ರಣ ಬೀಳಲು ಸಾಧ್ಯ. ಚರ್ಚ್, ಮಸೀದಿ, ಮಂದಿರಗಳು ಸೇರಿದಂತೆ ಧಾರ್ಮಿಕವಾಗಿ, ಸಾಮಾಜಿಕವಾಗಿಯೂ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯಬೇಕು. ಸಾರ್ವಜನಿಕರು ಸಾಮಾಜಿಕವಾಗಿ ತಮ್ಮನ್ನು ಒಗ್ಗೂಡಿಸಿಕೊಂಡು ಈ ಅಭಿಯಾನವನ್ನು ನಡೆಸಬೇಕು. ಡಿ ಎಡಿಕ್ಷನ್ ಸೆಂಟರ್ ಆರಂಭಿಸುವ ಮೊದಲು ನಾವು ಸುಮಾರು 10 ವರ್ಷಗಳ ಕಾಲ ಮನೆ ಮನೆಗಳು, ಸಮಾರಂಭಗಳು, ಸಾರ್ವಜನಿಕ ಸಭೆಗಳಲ್ಲಿ ಮಾಹಿತಿ ನೀಡುವ ಕಾರ್ಯ ಮಾಡಿದ್ದೇವೆ. ಅದರಿಂದಾಗಿಯೇ ಅಲ್ಕೋಹಾಲ್‌ನ ಚಟವನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಣ ತರಲು ಸಾಧ್ಯವಾಗಿದೆ. ಅದೇ ಮಾದರಿಯಲ್ಲಿ ಡ್ರಗ್ಸ್ ವಿರುದ್ಧ ಅಭಿಯಾನ ಆಗಬೇಕಾಗಿದೆ.

►ನಿಮ್ಮ ಪ್ರಕಾರ ಮಾದಕ ವ್ಯಸನ ಇಷ್ಟೊಂದು ಆಳವಾಗಿ ಬೇರೂರಲು ಕಾರಣವೇನಾಗಿರಬಹುದು?

-ಮಾದಕ ದ್ರವ್ಯ ಎಂದಾಕ್ಷಣ ಅಲ್ಕೋಹಾಲ್, ಗಾಂಜಾ ಹೆರೋಯಿನ್ ಮಾತ್ರವಲ್ಲದೆ, ನಾನಾ ರೀತಿಯಲ್ಲಿ ಇಂದು ಲಭ್ಯವಾಗುತ್ತದೆ. ಈ ಡ್ರಗ್ಸ್‌ನ ಮೂಲ ಅಲ್ಕೋಹಾಲ್ ಎಂದೂ ಹೇಳಬಹುದು. ನಮ್ಮ ದೇಶದಲ್ಲಿ ದೊಡ್ಡ ಸಮಸ್ಯೆಯೇ ಇದು. ಮಿಲಿಯ ಮಿಲಿಯ ಮಂದಿ ಈ ಚಟಕ್ಕೆ ಒಳಗಾಗಿ ಸಮಾಜ ಮಾತ್ರವಲ್ಲ, ತಮ್ಮ ಕುಟುಂಬಕ್ಕೇ ಮಾರಕವಾಗಿದ್ದಾರೆ. ಈ ಬಗ್ಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಮೆಡಿಕಲ್ ಸಾಯನ್ಸ್‌ನವರು ಸಮೀಕ್ಷೆ, ಅಧ್ಯಯನ ನಡೆಸಿ ಈ ಹಿಂದೆಯೇ ಸರಕಾರಕ್ಕೆ ವರದಿ ಒಪ್ಪಿಸಿದ್ದಾರೆ. ಇದನ್ನು ನಿಯಂತ್ರಿಸುವುದು ಸರಕಾರಕ್ಕೆ ತಲೆನೋವಿನ ಸಂಗತಿ. ಕಳೆದ 32 ವರ್ಷಗಳಿಂದ ನಮ್ಮ ಸಂಸ್ಥೆ ಲಿಂಕ್ ಡಿ ಎಡಿಕ್ಷನ್ ಸೆಂಟರ್ ವತಿಯಿಂದ ನಾವು ಈಗಾಗಲೇ ಲಕ್ಷಾಂತರ ಮಂದಿಗೆ ಈ ಚಟವನ್ನು ನಿಲ್ಲಿಸಲು ಪ್ರೇರೇಪಿಸಿದ್ದೇವೆ. ನಾನು ಯುವತಿಯಾಗಿರುವಾಗ ಈ ಚಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಮುಂದಾದವಳು. ಇಂತಹ ಸಂಸ್ಥೆಯನ್ನು ನಡೆಸುವುದು ಸುಲಭದ ಮಾತಲ್ಲ. ಮನಸ್ಸಿನಿಂದ ಬಂದ ಆಸಕ್ತಿಯಿಂದಾಗಿ ನಾವು ಆ ಕಾರ್ಯವನ್ನು ಅದೇ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಈವಾಗ ನಮ್ಮ ಡಿ ಎಡಿಕ್ಷನ್ ಸೆಂಟರ್‌ನಲ್ಲಿ ಸುಮಾರು 31 ಮಂದಿಗೆ ಚಿಕಿತ್ಸೆಯೊಂದಿಗೆ ಆಶ್ರಯ ಒದಗಿಸಲಾಗುತ್ತಿದೆ. ಅದರಲ್ಲಿ ನಾಲ್ಕು ಮಂದಿ ಗಾಂಜಾದಂತಹ ಡ್ರಗ್ಸ್ ವ್ಯಸನಕ್ಕೆ ತುತ್ತಾದವರೂ ಸೇರಿದ್ದಾರೆ.

►ಅಲ್ಕೋಹಾಲ್‌ಗೂ ಡ್ರಗ್ಸ್‌ಗೂ ನಡುವಿನ ವ್ಯತ್ಯಾಸ- ಸಂಬಂಧ?

-ಬಹುತೇಕವಾಗಿ ಮತ್ತೇರಿಸುವ ಮೊದಲ ಹೆಜ್ಜೆ ಅಲ್ಕೋಹಾಲ್ ಎನ್ನಬಹುದು. ಇಹಲೋಕದ ಪರಿಜ್ಞಾನ ಇಲ್ಲದೆ ತಮ್ಮದೇ ಲೋಕದಲ್ಲಿ ವಿಹರಿಸಬೇಕೆನ್ನುವವರು ಮೊದಲು ಅಲ್ಕೋಹಾಲ್ ಆಯ್ದುಕೊಳ್ಳುತ್ತಾರೆ. ಮೊದ ಮೊದಲು ಸ್ನೇಹಿತರು, ಕುಟುಂಬದ ಸಮಸ್ಯೆ, ಸಡಗರ ಈ ಎಲ್ಲಾ ನೆಪದಲ್ಲಿ ಈ ಚಟ ಆರಂಭಗೊಳ್ಳುತ್ತದೆ. ಹಿಂದೆಲ್ಲಾ ಮತ್ತು ಬರಿಸಲು ಅಲ್ಕೋಹಾಲ್ ಪ್ರಮುಖವಾಗಿದ್ದರೆ, ಬರ ಬರುತ್ತಾ, ಹೊಸ ಮಾದಕ ವ್ಯಸನದ ಹೊಸ ವಿಧಾನಗಳು ಅದಕ್ಕೆ ಸೇರ್ಪಡೆಗೊಂಡವು. ವ್ಯತ್ಯಾಸವೆಂದರೆ, ಅಲ್ಕೋಹಾಲ್ ವಾಸನೆಯಿಂದ ಪತ್ತೆ ಮಾಡಬಹುದು. ಆದರೆ ಡ್ರಗ್ಸ್ ಸೇವನೆ ಬಗ್ಗೆ ಕಂಡು ಹಿಡಿಯುವುದು ಬಲು ಕಷ್ಟ. ಗಾಂಜಾ, ಹೆರೋಯಿನ್‌ನಂತಹ ಅಮಲು ಪದಾರ್ಥಗಳು ಯಾವುದೇ ರೀತಿಯ ಪರಿಮಳ ಅಥವಾ ವಾಸನೆಯನ್ನು ಹೊಂದಿರುವುದಿಲ್ಲ. ಡ್ರಗ್ಸ್ ಚಟ ಹೊಂದಿದವರು ಕೆಲ ವರ್ಷಗಳ ಕಾಲ ತಮ್ಮ ಆಪ್ತರಿಗೂ ಗೊತ್ತಾಗದಂತೆ ತಮ್ಮ ವ್ಯಸನವನ್ನು ಮುಂದುವರಿಸಿದ ಅನೇಕ ಉದಾಹರಣೆಗಳನ್ನು ನಾನು ಗಮನಿಸಿದ್ದೇನೆ. ಈ ಡ್ರಗ್ಸ್ ಸೇವನೆಗೆ ಬೇಕಿರುವ ಪ್ರಮಾಣ ಕೂಡಾ ಅತ್ಯಲ್ಪ. ಅಲ್ಕೋಹಾಲ್ ಬಾಟಲಿ ಅಥವಾ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಸರಬರಾಜಾಗುತ್ತದೆ. ಆದರೆ ಡ್ರಗ್ಸ್ ಅತ್ಯಲ್ಪ ಪ್ರಮಾಣದ ಹುಲ್ಲು ಅಥವಾ ಹುಡಿ ರೂಪದಲ್ಲಿ ದೊರೆಯುತ್ತದೆ. ಗಂಡಸರು ತಮ್ಮ ಜೀನ್ಸ್ ಪ್ಯಾಂಟ್‌ನ ಸ್ಟಿಚ್‌ನಲ್ಲಿ ಪ್ಯಾಕೇಟ್‌ಗಳಲ್ಲಿ ಇಟ್ಟುಕೊಂಡಿರುವುದನ್ನು ನಾನು ನೋಡಿದ್ದೇನೆ.

►ನಿಮಗೆ ಬಂದಂತಹ ಪ್ರಕರಣಗಳಲ್ಲಿ ಯಾವೆಲ್ಲಾ ರೂಪದಲ್ಲಿ ನೀವು ಡ್ರಗ್ಸ್ ಪದಾರ್ಥಗಳನ್ನು ಕಂಡಿದ್ದೀರಿ?

-ನಗರದಲ್ಲಿ ನಾವು ಹುಲ್ಲು, ಪುಡಿ ರೂಪದಲ್ಲಿ ಕಂಡಿದ್ದೇವೆ. ಗಾಂಜಾವನ್ನು ನಮ್ಮ ಜಿಲ್ಲೆಯ ಕೆಲವೊಂದು ಗ್ರಾಮಾಂತರ ಪ್ರದೇಶದ ಗುಡ್ಡಗಳಲ್ಲೂ ಬೆಳೆಸುವವರಿದ್ದಾರೆ. ಅಲ್ಲಿಂದಲೂ ಅದು ಸರಬರಾಜಾಗುವ ಆರೋಪ ಇದೆ. ಗಾಂಜಾ ಎಲೆ ಅಥವಾ ಹೂವಿನ ರೂಪದಲ್ಲಿಯೂ ಇರುತ್ತದೆ. ನಮ್ಮ ನೆರೆ ರಾಜ್ಯದಿಂದಲೂ ಇದು ಸರಬರಾಜುಗುತ್ತಿದೆ ಎನ್ನಲಾಗುತ್ತದೆ.

►ವಿಶೇಷವೆಂದರೆ ಗಾಂಜಾ ವ್ಯಸನಿಗಳೇ ಗಾಂಜಾ ಮಾರಾಟಗಾರರು!

-ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಕೆಲಸವನ್ನು ಈ ಗಾಂಜಾ ವ್ಯಸನಿಗಳೇ ಮಾಡುತ್ತಾರೆ. ಅವರಿಂದಲೇ ಮಾಡಿಸಲಾಗುತ್ತದೆ. ಹಾಗಾಗಿ ಇದರ ಮೂಲವನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿದೆ. ಮಾರಾಟ ಮಾಡುವವನೇ ಗ್ರಾಹಕರನ್ನು ಸೆಳೆಯುತ್ತಾನೆ. ಇದರಿಂದ ಮಜಾ, ಕಿಕ್ ಸಿಗುತ್ತದೆ ಎಂದು ಹೇಳಿ ತನ್ನ ಆಪ್ತ ವಲಯವನ್ನೇ ಗುರಿಯಾಗಿಸುವುದು ಸಾಮಾನ್ಯ.

►ನಿಮ್ಮಲ್ಲಿಗೆ ಬಂದ ಇತ್ತೀಚಿನ ಡ್ರಗ್ಸ್ ಪ್ರಕರಣದ ಬಗ್ಗೆ ವಿವರ ನೀಡಬಲ್ಲಿರಾ?

-ಕೆಲ ದಿನಗಳ ಹಿಂದೆ ನನ್ನಲ್ಲಿಗೆ ಬಂದಿದ್ದ ಯುವತಿಯೊಬ್ಬಳು ತಪ್ಪೊಪ್ಪಿಕೊಂಡಿದ್ದಾಳೆ. ಕಾಲೇಜಿಗೆ ಹೋಗುವ ಹುಡುಗಿ. ಆಕೆ ಹೇಳಿದಂತೆ ಆಕೆಯ ಸೋದರ ಸಂಬಂಧಿ ಸಹೋದರಿ ತನ್ನ ಮನೆಗೆ ಸಿಗರೇಟು ತರುತ್ತಾಳೆ. ಸಿಗರೇಟ್‌ನಲ್ಲಿ ಗಾಂಜಾ. ಶ್ರೀಮಂತ ಕುಟುಂಬ. ಇಬ್ಬರು ಮನೆಯ ರೂಂ ಬಾಗಿಲು ಹಾಕಿ ಈ ಸಿಗರೇಟು ಸೇದುತ್ತಾರೆ. ಮನೆಯವರಿಗೆ ಯಾರಿಗೂ ಇದರ ಅರಿವೇ ಇಲ್ಲ. ಮನೆಯಲ್ಲಿಯೇ ಸಿಗರೇಟ್‌ಗೆ ಗಾಂಜಾ ಸೇರಿಸಿ ಧಮ್ ಎಳೆಯುವಷ್ಟರಮಟ್ಟಿಗೆ ನಮ್ಮ ಸಂಸ್ಕೃತಿ ತಲುಪಿದೆ ಎಂದರೆ ಈ ಡ್ರಗ್ಸ್ ಹಾವಳಿ ಎಷ್ಟಿರಬಹುದು ಎಂಬುದು ಯಾರಿಂದಲೂ ಊಹಿಸಬಹುದು.

►ಆ ಪ್ರಕರಣದ ಬಗ್ಗೆ ಮುಂದೆ ಏನಾಯಿತು?

 -ಆಕೆ ನನ್ನಲ್ಲಿ ತಪ್ಪೊಪ್ಪಿಕೊಂಡು ಮನೆಯಲ್ಲಿ ತಿಳಿಸಬಾರದೆಂದು ಅಲವತ್ತುಕೊಂಡಳು. ಆದರೆ ನಾನು ಸಮಾಜದ ಹಿತಾಸಕ್ತಿಯಿಂದ ಆಕೆಯ ಪೋಷಕರ ಬಳಿ ಹೇಳುವುದು ಸರಿ ಎಂದೆನಿಸಿ ಹೇಳಿಕೊಂಡೆ. ಇದು ಆ ಯುವತಿಯ ಭವಿಷ್ಯ ಮಾತ್ರವಲ್ಲದೆ, ಆಕೆಯ ಪೋಷಕರ ಹೊಣೆಗಾರಿಕೆ ಕೂಡಾ ಆಗಿದೆ. ಹಾಗಾಗಿ ಆಕೆಯ ಪೋಷಕರನ್ನು ಕರೆಸಿ ಮನೆಯಲ್ಲಿ ಮಕ್ಕಳು ಬಾಗಿಲು ಮುಚ್ಚಿಕೊಂಡು ಇರುವ ಪರಿಸ್ಥಿತಿಬಗ್ಗೆಯೂ ನಿಗಾ ಇರಿಸುವಂತೆ ತಿಳಿ ಹೇಳಿದ್ದೇನೆ. ಮನೆಯಲ್ಲಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಬಾಗಿಲು ಹಾಕಿಕೊಂಡು ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಪ್ರೀತಿಯಿಂದ ಅವರಿಗೆ ತಿಳಿ ಹೇಳಬೇಕು. ಸರಿ ತಪ್ಪಿನ ಬಗ್ಗೆ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಬೇಕು. ಮನೆಯ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಇರಿಸಲು ಸಾಧ್ಯವೇ? ಆ ರೀತಿ ಸಿಸಿ ಕ್ಯಾಮರಾ ಇರಿಸಿ ಅವರ ಚಲನವಲನಗಳನ್ನು ಕಂಡುಕೊಳ್ಳುವುದು ಸುಸಂಸ್ಕೃತ ಜೀವನವೇ ಎಂಬ ಸತ್ಯವನ್ನು ಪೋಷಕರು ಅರಿತುಕೊಳ್ಳಬೇಕು.

►ನೀವು ಕಂಡಂತಹ ಪ್ರಕರಣಗಳಲ್ಲಿ ಈ ಡ್ರಗ್ಸ್ ಯಾವ ವಯಸ್ಸಿನವರಲ್ಲಿ ಹೆಚ್ಚು?

-ಏಳೆಂಟು ವರ್ಷ ಪ್ರಾಯದ ಮಕ್ಕಳೂ ಈ ಚಟವನ್ನು ಹತ್ತಿಸಿಕೊಂಡವರನ್ನು ಕಂಡಿದ್ದೇನೆ. ಬಹುತೇಕವಾಗಿ ಇದು ಹದಿಹರೆಯದವರಲ್ಲೇ ಹೆಚ್ಚು. ಆ ಬಳಿಕ 10ನೇ ತರಗತಿಯಿಂದ ಪಿಯುಸಿ ಮಕ್ಕಳು ಮಾತ್ರವಲ್ಲದೆ, ವೈದ್ಯಕೀಯ, ಇಂಜಿನಿಯರಿಂಗ್ ಕಲಿಯುವ ಕೆಲ ಮಕ್ಕಳೂ ಈ ಚಟಕ್ಕೆ ತಮ್ಮನ್ನು ಬಲಿಯಾಗಿಸಿಕೊಂಡಿದ್ದಾರೆ.

►ಯಾವೆಲ್ಲಾ ರೀತಿಯ ಡ್ರಗ್ಸ್ ಪ್ರಕರಣಗಳು ನಿಮ್ಮ ಬಳಿಗೆ ಬಂದಿವೆ?

-ಕೆಲ ಪೋಷಕರು ಕೆಲವೊಂದು ರೀತಿಯ ಸಣ್ಣ ಪ್ಯಾಕೆಟ್‌ಗಳನ್ನು ಹಿಡಿದು ನನ್ನ ಬಳಿಗೆ ಬಂದು, ನನ್ನ ಮಗನದ್ದೋ, ಮಗಳದ್ದೋ ಬ್ಯಾಗ್, ಕಪಾಟಿನಲ್ಲಿ ಇದು ಸಿಕ್ಕಿದ್ದು, ಇದು ಏನು ಎಂದು ಪ್ರಶ್ನಿಸಿದವರಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ನಗರದಿಂದ ಹೊರವಲಯದ ಮನೆಯ ಬಾಲಕಿಯೊಬ್ಬಳ ಪ್ರಕರಣ. ಆಕೆ ಮನೆಯವರಿಗೆ ಕಾಣದಂತೆ ಗಾಂಜಾ ಹುಡಿಯನ್ನು ಇಲೆಕ್ಟ್ರಿಸಿಟಿಯ ಬಾಕ್ಸ್‌ನಲ್ಲಿ ಅಡಗಿಸಿಡುತ್ತಿದ್ದಳು. ಮನೆಯವರು ತಮ್ಮ ಮಗಳ ವ್ಯಸನದ ಬಗ್ಗೆ ಅನುಮಾನಗೊಂಡಾಗ ಮನೆಯ ಪ್ರತಿಯೊಂದು ಇಂಚನ್ನೂ ಪರಿಶೀಲಿಸುವಂತೆ ತಿಳಿಸಿದ್ದೆ. ಹಾಗೆ ಆ ಪ್ಯಾಕೇಟ್ ಸಿಕ್ಕಿತ್ತು.

►ಈ ಡ್ರಗ್ಸ್ ವ್ಯಸನಕ್ಕೆ ಚಿಕಿತ್ಸೆ ಯಾವ ರೀತಿಯಲ್ಲಿ?

-ಆರಂಭಿಕ ಹಂತದಲ್ಲಿ ಈ ವ್ಯಸನಕ್ಕೊ ಳಗಾದವರನ್ನು ಮುಕ್ತರನ್ನಾಗಿಸುವುದು ಸುಲಭ. ಆಪ್ತ ಸಮಾಲೋಚನೆಯ ಮೂಲಕ ಅವರಿಗೆ ತಿಳಿ ಹೇಳುವ ಮೂಲಕ ಅವರನ್ನು ಸರಿದಾರಿಗೆ ತರಬಹುದು. ನಾನು ಎಂಎಸ್‌ಡಬ್ಲು ಮಾಡುತ್ತಿರುವಾಗಲೇ ಇಂತಹ ಹಲವಾರು ಪ್ರಕರಣಗಳನ್ನು ನಾವು ಮಾನಸಿಕ ತಜ್ಞರಿಗೆ ರೆಫರ್ ಮಾಡಿ ಚಿಕಿತ್ಸೆ ನೀಡುವಲ್ಲಿ ಸಹಕರಿಸಿದ್ದೂ ಇದೆ. ಆದರೆ ಈ ಚಟ ವಿಪರೀತಕ್ಕೆ ತೆರಳಿದಾಗ, ಅವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿರುತ್ತದೆ. ತೀರಾ ಅಪಾಯಕಾರಿ ಮಟ್ಟಕ್ಕೆ ಈ ಚಟ ಬೆಳೆದು ಬಿಟ್ಟಾಗ, ಪೋಷಕರಿಗೂ ಇದು ಅರಿವಿಗೆ ಬಾರದಿದ್ದಾಗ, ಆತ್ಮಹತ್ಯೆಯಂತಹ ಪ್ರಸಂಗಗಳೂ ಈ ವ್ಯಸನದಿಂದಾಗಿ ನಡೆದಿವೆೆ.

►ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆಯ ಅಗತ್ಯವಿದೆಯೇ?

-ಖಂಡಿತಾ, ಬಹುತೇಕವಾಗಿ ಎಲ್ಲಾ ರೀತಿಯ ಮಾದಕ ವ್ಯಸನಿಗಳಿಗೆ ಮಾನಸಿಕ ರೋಗಿಗಳ ಜತೆ ಯಲ್ಲೇ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಡ್ರಗ್ಸ್‌ನಂತಹ ವ್ಯಸನಕ್ಕೊಳಗಾದವರ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆಯ ಅಗತ್ಯವಿದೆ. ನಾವು ಡಿ ಎಡಿಕ್ಷನ್ ಸೆಂಟರ್ ಆರಂಭಿಸಿದಾಗ ಅಲ್ಲಿ ಇಂತಹ ಡ್ರಗ್ಸ್ ವ್ಯಸನಿಗಳಿಗೂ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ಆದರೆ ಇದು ಸರಿಯಲ್ಲ. ಪ್ರತ್ಯೇಕವಾದ ವ್ಯವಸ್ಥೆ ಬೇಕು. ಮಕ್ಕಳಿಗೆ, ಹದಿ ಹರೆಯದವರಿಗೆ ಮಾತ್ರವಲ್ಲದೆ ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಚಿಕಿತ್ಸಾ ವ್ಯವಸ್ಥೆ ಅಗತ್ಯ. ಪ್ರಸ್ತುತ ವ್ಯವಸ್ಥೆ ಇಲ್ಲದೆ ವಯಸ್ಕರ ಜತೆ ಮಕ್ಕಳ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಆದರೆ ಈ ರೀತಿ ಮಾಡುವುದರಿಂದ ಒಂದು ಸಮಸ್ಯೆ ಪರಿಹಾರಕ್ಕೆ ಬಂದ ಮಕ್ಕಳು ಹೊರ ಹೋಗುವಾಗ ಅಲ್ಲಿನ ವಯಸ್ಕರಿಂದ ಇನ್ನೊಂದು ಚಟವನ್ನು ಕಲಿತು ಹೊರಹೋಗುವ ಪರಿಸ್ಥಿತಿ ಇದೆ. ವಿದೇಶಗಳಲ್ಲಿ ಡಿ ಎಡಿಕ್ಷನ್ ಸೆಂಟರ್ ಅತ್ಯಂತ ಸುವ್ಯವಸ್ಥಿತವಾಗಿರುತ್ತದೆ. ಸರಕಾರದಿಂದಲೇ ನಡೆಸಲ್ಪಡುತ್ತದೆ. ಫಿಲಿಪೀನ್ಸ್‌ನ ಇಂತಹ ಕೇಂದ್ರದಲ್ಲಿ ಕೆಲ ಸಮಯ ಇದ್ದು ಅಧ್ಯಯನ ಮಾಡಿ ನಾನು ಬಂದಿದ್ದೆ. ಈ ಚಟಕ್ಕೆ ಒಳಗಾದವರನ್ನು ಅದರಿಂದ ಹೊರತರುವುದು ಚಿಕಿತ್ಸೆ ಕೊಡಿಸುವುದು ತೀರಾ ಸಾಹಸಮಯ. ಡ್ರಗ್ಸ್ ಚಟಕ್ಕೆ ಒಳಗಾದವರನ್ನು ಬಿಡಿಸುವ ಸಂದರ್ಭ ಅವರು ಯಾವುದೇ ರೀತಿಯ ಅಪಾಯಕ್ಕೂ ಮುಂದಾಗಬಹುದು. ಹಾಗಾಗಿ ವಿದೇಶಗಳಲ್ಲಿರುವ ಡಿ ಎಡಿಕ್ಷನ್ ಸೆಂಟರ್‌ಗಳಲ್ಲಿನ ಪ್ರತ್ಯೇಕ ಕೊಠಡಿಗಳು ಕೂಡಾ ಕಲ್ಲಿನದ್ದಾಗಿರದೆ ಅದು ಹಾಸಿಗೆ ರೂಪದಲ್ಲಿರುತ್ತದೆ. ವ್ಯಸನಿ ತನ್ನ ತಲೆಯನ್ನೋ, ಕೈ ಕಾಲುಗಳುಗಳನ್ನೋ ಗೋಡೆಗೆ ಬಡಿದು ಅಪಾಯ ಸೃಷ್ಟಿಸುವುದನ್ನು ತಪ್ಪಿಸಲು ಈ ರೀತಿಯ ವ್ಯವಸ್ಥಿತ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

►ಡ್ರಗ್ಸ್‌ಗೆ ಸಂಬಂಧಿಸಿ ನಿಮ್ಮ ಜೀವನದಲ್ಲಿ ನಿಮ್ಮನ್ನು ಇಂದಿಗೂ ಕಾಡುವ ಪ್ರಕರಣ?

ಶ್ರೀಮಂತ ಕುಟುಂಬದ ಯುವಕ ಯುವತಿ ಪ್ರೇಮಕ್ಕೆ ಸಿಲುಕಿ ವಿವಾಹವಾಗುತ್ತಾರೆ. ಆದರೆ ಯುವಕ ಡ್ರಗ್ಸ್ ವ್ಯಸನಿಯಾಗಿದ್ದ. ಸುಮಾರು 15ಕ್ಕೂ ಅಧಿಕ ಬಾರಿ ಆತನನ್ನು ನಮ್ಮಲ್ಲಿಗೆ ತಂದು ಅಡ್ಮಿಟ್ ಮಾಡಲಾಗುತ್ತದೆ. ಪ್ರತಿ ಸಲವೂ ಆತನ ಪತ್ನಿ ಜತೆಗೆ ಬಂದು ಆತನನ್ನು ಸರಿಪಡಿಸಿಕೊಡಿ ಎಂದು ಅಂಗಲಾಚುತ್ತಿದ್ದಳು. ಪ್ರತಿ ಬಾರಿ ಚಿಕಿತ್ಸೆ ನೀಡಿ ಮನೆಗೆ ಹೋದ ಬಳಿಕ ಮತ್ತೆ ಅದೇ ಚಟ. ಇಬ್ಬರೂ ಬಹಳಷ್ಟು ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ಆದರೆ ಆತನ ಪೋಷಕರು ಮಾತ್ರ ತಮ್ಮ ಮಗ ಡ್ರಗ್ಸ್ ವ್ಯಸನಿ ಎಂಬುದನ್ನು ಒಪ್ಪಲು ತಯಾರಿರಲಿಲ್ಲ. ಬಳಿಕ ಅವರಿಬ್ಬರು ವಿಚ್ಚೇದನ ಪಡೆಯುವ ಪರಿಸ್ಥಿತಿಗೆ ತಲುಪಿ ಬಳಿಕ ಆಕೆ ಮಗುವಿನೊಂದಿಗೆ ಒಂಟಿ ಜೀವನ ನಡೆಸಬೇಕಾದ ಪ್ರಸಂಗ ಬಂತು. ಇಂತಹ ಪರಿಸ್ಥಿತಿಯನ್ನು ಆಲೋಚಿಸುವಾಗಲೇ ನೋವಾಗುತ್ತದೆ. ಅದನ್ನು ಅನುಭವಿಸಿದವರ ಪರಿಸ್ಥಿತಿ ಹೇಗಿರಬೇಡ.

ಬಹುತೇಕ ಅಪರಾಧ ಕೃತ್ಯಗಳ ಹಿಂದಿದೆ ಡ್ರಗ್ಸ್!

ಮಾದಕ ವ್ಯಸನಗಳ ಕುರಿತಂತೆ ನಾನು ಸಾಕಷ್ಟು ಪೊಲೀಸರು, ವಕೀಲರನ್ನು ಭೇಟಿಯಾಗುವುದರಿಂದ ತಿಳಿದುಕೊಂಡ ಪ್ರಮುಖ ವಿಚಾರವೆಂದರೆ, ಬಹುತೇಕ ಅಪರಾಧ ಕೃತ್ಯಗಳ ಹಿಂದೆ ಈ ಡ್ರಗ್ಸ್‌ನ ಕೈವಾಡವಿರುವುದು. ಈ ಡ್ರಗ್ಸ್ ಚಟಕ್ಕೆ ಯುವ ಜನತೆ ಬಲಿ ಬೀಳುವಲ್ಲಿ ಹಲವಾರು ಕಾರಣಗಳಿರ ಬಹುದು. ಹದಿಹರೆಯದವರ ಮನಸ್ಸು ಬಲು ಚಂಚಲವಾಗಿರುತ್ತದೆ. ಕೆಲವೊಮ್ಮೆ ಸರಿ ತಪ್ಪನ್ನು ಗ್ರಹಿಸುವ ಶಕ್ತಿಯಾಗಲಿ, ತಾಳ್ಮೆಯಾಗಲಿ ಅವರಲ್ಲಿ ಇಲ್ಲದಿರಬಹುದು. ಇಂತಹ ಸಂದರ್ಭ ಬಹು ಮುಖ್ಯವಾಗಿ ಪೋಷಕರ ಜವಾಬ್ದಾರಿ ಹೆಚ್ಚಿರುತ್ತದೆ. ಎಲ್ಲರಿಗೂ ನಾನಾ ರೀತಿಯ ಒತ್ತಡಗಳಿರಬಹುದು. ಆದರೆ ತಮ್ಮ ಹದಿ ಹರೆಯದ ಮಕ್ಕಳ ಜತೆ ಅದೆಷ್ಟು ಪ್ರೀತಿ, ವಾತ್ಸಲ್ಯವನ್ನು ಅವರು ತೋರಿಸುತ್ತಾರೋ ಅದೇ ರೀತಿ ಅವರ ಪ್ರತಿಯೊಂದು ಚಲನವಲನಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಹಾಗೆಂದು ಅತಿಯಾದ ಶಿಸ್ತನ್ನು ಪೋಷಕರು ಪಾಲಿಸಬೇಕೆಂದಲ್ಲ. ಬದಲಾಗಿ ಪ್ರೀತಿಯ ಜತೆಗೆ ಮಕ್ಕಳ ಬಗ್ಗೆ ಕಾಳಜಿ, ಅವರಿಗಾಗಿ ಒಂದಿಷು್ಟ ಸಮಯವನ್ನೂ ಮೀಸಲಿಡಬೇಕು.

Writer - ಸಂದರ್ಶನ: ಸತ್ಯಾ ಕೆ.

contributor

Editor - ಸಂದರ್ಶನ: ಸತ್ಯಾ ಕೆ.

contributor

Similar News