"ಆರೆಸ್ಸೆಸ್ ಕಾರ್ಯಕರ್ತರು ಮತ್ತು ಪೊಲೀಸರು ನಮ್ಮ ಮೇಲೆ ಲಾಠಿ ಬೀಸಿದರು"

Update: 2020-02-26 10:21 GMT

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ಸಿಎಎ ಪರ-ವಿರೋಧಿ ಹೋರಾಟಗಾರರ ನಡುವೆ ನಡೆಯುತ್ತಿರುವ ಭಾರೀ ಘರ್ಷಣೆಯಲ್ಲಿ ಮೌಜ್ಪುರ್ ಪ್ರದೇಶದಲ್ಲಿ ಹೆಡ್ ಕಾನ್‍ಸ್ಟೇಬಲ್ ಒಬ್ಬರು ಬಲಿಯಾಗಿ ಶಾಹದರ ಡಿಸಿಪಿ ಅಮಿತ್ ಶರ್ಮ ಗಾಯಗೊಂಡಿದ್ದಾರೆ. ಈಶಾನ್ಯ ದಿಲ್ಲಿಯ ಹತ್ತು ಪ್ರದೇಶಗಳಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಲಾಗಿದೆ.

'ಪ್ರತಿಭಟನಾ ಸ್ಥಳಗಳನ್ನು ಪೊಲೀಸರು ಮೂರು ದಿನಗಳೊಳಗೆ ತೆರವುಗೊಳಿಸಬೇಕೆಂದು' ಹೇಳಿದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೋಮವಾರ ಪೊಲೀಸ್ ಸಿಬ್ಬಂದಿ ಬಲಿಯಾದ ಸುದ್ದಿಯ ಬೆನ್ನಿಗೆ ಟ್ವೀಟ್ ಮಾಡಿ ``ಪರಿಹಾರ ಕಂಡುಕೊಳ್ಳಲು ಹಿಂಸೆ ಮಾರ್ಗವಲ್ಲ'' ಎಂದಿದ್ದಾರೆ.

"ಇಂದು ಬೆಳಗ್ಗೆ ಸುಮಾರು 10.20ರ ಸುಮಾರಿಗೆ ಆರೆಸ್ಸೆಸ್ಸಿನ ಜನರು ಪೊಲೀಸರೊಂದಿಗೆ ಬಂದು ಪ್ರತಿಭಟನಾ ಸ್ಥಳದಲ್ಲಿ ಲಾಠಿ ಚಾರ್ಜ್ ಮಾಡಲಾರಂಭಿಸಿದ್ದರು'' ಎಂದು ಚಾಂದ್‍ ಬಾಗ್ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಶಹದಾಬ್ ಎಂಬವರು ವಿವರಿಸಿದ್ದಾರೆ. ಪ್ರತಿಭಟನಾ  ಸ್ಥಳದಲ್ಲಿ ಸುಮಾರು 150 ಮಹಿಳೆಯರು ಹಾಗೂ 200 ಪುರುಷರಿದ್ದರು. ಅರ್ಧ ಗಂಟೆಗೂ ಹೆಚ್ಚು ಸಮಯ ಲಾಠಿ ಚಾರ್ಜ್ ನಡೆಸಿ ಮಹಿಳೆಯರು ಸೇರಿದಂತೆ ಹಲವು ಪ್ರತಿಭಟನಕಾರರಿಗೆ ಗಾಯಗಳನ್ನುಂಟು ಮಾಡಿದ್ದರು ಎಂದು ಶಹಬಾದ್  ವಿವರಿಸಿದ್ದಾರೆ.

ಹಿಂಸಾತ್ಮಕ ಘಟನೆಗಳಿಗೆ ಪ್ರತಿಕ್ರಿಯಿಸಿದ ದಿಲ್ಲಿ  ಸಿಎಂ ಅರವಿಂದ್ ಕೇಜ್ರಿವಾಲ್ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ರ ಕ್ರಮ ಕೈಗೊಳ್ಳುವಂತೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.

ದಿಲ್ಲಿಯ ಹೌಝ್ ರಾಣಿ ಪ್ರದೇಶದಲ್ಲಿ ಮುಖ್ಯ ರಸ್ತೆಯತ್ತ ಮೆರವಣಿಗೆ ಹೊರಟಿದ್ದ ಸಿಎಎ ವಿರೋಧಿ ಹೋರಾಟಗಾರರ  ಮೇಲೆ ಪೊಲೀಸರು ಲಾಠಿಜಾರ್ಜ್ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಹಲವಾರು ಮಹಿಳೆಯರಿಗೆ ಗಾಯಗಳುಂಟಾಗಿವೆ ಹಾಗೂ ಗಾಯಾಳುಗಳನ್ನು ಮದನ್ ಮೋಹನ್ ಮಾಲವಿಯ  ಆಸ್ಪತ್ರೆಗೆ ದಾಖಲಿಸಾಗಿದೆ. ದಿಲ್ಲಿ ಪೊಲೀಸರ ಹೀನ ಕೃತ್ಯದ ಬಗ್ಗೆ ತಮಗೆ ಮಾಹಿತಿ ದೊರಕಿದೆ ಎಂದು ಹೇಳಿರುವ ಸ್ಥಳೀಯ ಆಪ್ ಶಾಸಕ ಸೋಮನಾಥ್ ಭಾರತಿ ಘಟನೆಯ ಮೆಜಿಸ್ಟೀರಿಯಲ್ ತನಿಖೆಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News