ವಿವೇಕಾನಂದರನ್ನು ‘ವಿವೇಕಾಮನ್’ ಮಾಡಿದ ಟ್ರಂಪ್!

Update: 2020-02-24 14:43 GMT

ಹೊಸದಿಲ್ಲಿ,ಫೆ.24: ಅಹ್ಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣದಲ್ಲಿಯ ಹಲವಾರು ತಪ್ಪು ಉಚ್ಚಾರಣೆಗಳು ಟ್ವಿಟರ್‌ನಲ್ಲಿ ನಗೆಪಾಟಲಿಗೆ ಗುರಿಯಾಗಿವೆ. ಇದೇ ವೇಳೆ ತನ್ನ ಭಾಷಣದಲ್ಲಿ ಬಾಲಿವುಡ್ ಮತ್ತು ಭಾರತದ ಗಣ್ಯ ವ್ಯಕ್ತಿಗಳನ್ನು ಉಲ್ಲೇಖಿಸಿದ್ದಕ್ಕಾಗಿ ಕೆಲವು ಹೊಗಳಿಕೆಗಳೂ ಟ್ರಂಪ್‌ ಗೆ ದಕ್ಕಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ‘ಚಿವಾಲಾ (ಚಾಯ್‌ವಾಲಾ)ನ ಮಗ’ ಎಂದು ಬಣ್ಣಿಸುವುದರಿಂದ ಹಿಡಿದು ವೇದಗಳನ್ನು ‘ವೇಸ್ತಾಸ್’ ಎಂದು ತಪ್ಪಾಗಿ ಉಚ್ಚರಿಸುವವರೆಗೆ ಮತ್ತು ಸ್ವಾಮಿ ವಿವೇಕಾನಂದರ ಹೆಸರನ್ನು ‘ವಿವೇಕಾಮನ್’ ಎಂದು ಬದಲಿಸಿದ್ದು ಸೇರಿದಂತೆ ಟ್ರಂಪ್ ಉಚ್ಚಾರಣೆಗಳಲ್ಲಿನ ಹಲವಾರು ತಪ್ಪುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಬಾಲಿವುಡ್ ಪ್ರತಿಭೆಗಳನ್ನು ಪ್ರಶಂಸಿಸಿದ್ದಕ್ಕಾಗಿ ಮತ್ತು ಎರಡು ಸಾರ್ವಕಾಲಿಕ ಜನಪ್ರಿಯ ಹಿಂದಿ ಚಿತ್ರಗಳಾದ ‘ಶೋಲೆ’ ಮತ್ತು ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಉಲ್ಲೇಖಕ್ಕಾಗಿ ಕೆಲವು ನೆಟ್ಟಿಗರು ಟ್ರಂಪ್ ಅವರನ್ನು ಶ್ಲಾಘಿಸಿದ್ದಾರೆ.

ಟ್ರಂಪ್ ಭಾಷಣದ ಹೆಗ್ಗಳಿಕೆ ಮುಖ್ಯವಾಗಿ ಅದನ್ನು ಬರೆದವರಿಗೆ ಸಲ್ಲಬೇಕು. ಅವರು ಇಂದಿನ ಭಾರತದ ಬಗ್ಗೆ ಉತ್ತಮ ಹೋಮ್‌ವರ್ಕ್ ಮಾಡಿರುವುದನ್ನು ಟ್ವಿಟರಿಗರು ಬೆಟ್ಟು ಮಾಡಿದ್ದಾರೆ. ಉಚ್ಚಾರಣೆಗೆ ಸಂಬಂಧಿಸಿದಂತೆ ಹೇಳುವುದಾದರೆ ‘ಎನಾನಿಮಸ್’ ಇಂಗ್ಲಿಷ್ ಶಬ್ದದ ಉಚ್ಚಾರಣೆಯೂ ಟ್ರಂಪ್‌ಗೆ ಕಷ್ಟವಾಗಿತ್ತು. ವಿವೇಕಾನಂದರಂತೂ ಅವರ ಪಾಲಿಗೆ ಕಬ್ಬಿಣದ ಕಡಲೆಕಾಯಿಯಾಗಿದ್ದರು ಎಂದು ಟ್ವಿಟರಿಗರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News