ಗುಜರಾತ್‌ ಗೆ ಟ್ರಂಪ್ ಭೇಟಿಗೆ ಮುನ್ನಾದಿನ ರಾಜ್ಯದಲ್ಲಿ ಕೋಮು ಗಲಭೆ: ಮನೆ,ಅಂಗಡಿಗಳಿಗೆ ಬೆಂಕಿ

Update: 2020-02-24 16:41 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಫೆ.24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಹ್ಮದಾಬಾದ್ ಭೇಟಿಯ ಮುನ್ನಾದಿನವಾದ ರವಿವಾರ ಗುಜರಾತಿನ ಆನಂದ ಜಿಲ್ಲೆಯ ಕೋಮುಸೂಕ್ಷ್ಮ ಪಟ್ಟಣ ಖಂಭಾತ್‌ನಲ್ಲಿ ಕೋಮುದಂಗೆಗಳು ಭುಗಿಲೆದ್ದಿದ್ದು 13 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸುಮಾರು 30 ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ.

ರವಿವಾರ ಮಧ್ಯಾಹ್ನ ಎರಡು ಸಮುದಾಯಗಳಿಗೆ ಸೇರಿದ ಗುಂಪುಗಳ ನಡುವೆ ಆರಂಭಗೊಂಡಿದ್ದ ಗಲಾಟೆ ವಿಕೋಪಕ್ಕೆ ತಿರುಗಿ ಉಭಯತರ ನಡುವೆ ಭಾರೀ ಕಲ್ಲುತೂರಾಟ ನಡೆದಿತ್ತು. ಆಟೋರಿಕ್ಷಾಗಳು,ದ್ವಿಚಕ್ರ ವಾಹನಗಳು ಮತ್ತು ಸೈಕಲ್‌ಗಳು ಸೇರಿದಂತೆ ಸುಮಾರು 25 ವಾಹನಗಳಿಗೆ ಹಾನಿಯಾಗಿದೆ. ದುಷ್ಕರ್ಮಿಗಳು ಅಂಗಡಿಗಳಿಗೂ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದರು.

 ಖಂಬಾತ್‌ನ ಅಕ್ಬರ್‌ಪುರ ಪ್ರದೇಶದಲ್ಲಿ ಈ ದಂಗೆಗಳು ನಡೆದಿದ್ದು,ಈ ಪ್ರದೇಶವು ಹಿಂದೆಯೂ ಇಂತಹ ಸರಣಿ ಘರ್ಷಣೆಗಳಿಗೆ ಸಾಕ್ಷಿಯಾಗಿತ್ತು. ರವಿವಾರದ ಹಿಂಸಾಚಾರಕ್ಕೆ ಕಾರಣವೇನು ಎನ್ನುವುದು ಸ್ಪಷ್ಟವಾಗಿಲ್ಲ.

ಪರಿಸ್ಥಿತಿಯು ಈಗ ನಿಯಂತ್ರಣದಲ್ಲಿದ್ದು,ಆರ್‌ಎಎಫ್ ಪಡೆಗಳನ್ನು ನಿಯೋಜಿಸಲಾ ಗಿದೆ ಎಂದು ಆನಂದ ಎಸ್‌ಪಿ ದಿವ್ಯ ಮಿಶ್ರಾ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News